ಬೆಂಗಳೂರು: ನಗರದಲ್ಲಿ ಕಸದ ಸಮಸ್ಯೆ ಮತ್ತೆ ಉಲ್ಬಣಗೊಳ್ಳುತ್ತಿದ್ದು, ಮಿಟ್ಟಗಾನಹಳ್ಳಿ ಪ್ರದೇಶದಲ್ಲಿನ ಕಾಂಪ್ಯಾಕ್ಟರ್‌ಗಳು ತ್ಯಾಜ್ಯ ವಿಲೇವಾರಿ ಮಾಡುತ್ತಿಲ್ಲ ಎಂದು ತಿಳಿದು ಬಂದಿದೆ. ಹೀಗಾಗಿ ನಗರದ ವಿವಿಪುರ, ಚಾಮರಾಜಪೇಟೆ, ಕೆ.ಆರ್.ಮಾರುಕಟ್ಟೆ, ವಿಜಯನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ರಸ್ತೆಗಳಲ್ಲಿ ಕಸ ಹಾಗೆಯೇ ಬಿದ್ದಿದೆ.
ಮಹದೇವಪುರದ ಕಣ್ಣೂರು ಬಳಿಯ ಮಿಟ್ಟಗಾನಹಳ್ಳಿ ಡಂಪಿಂಗ್ ಯಾರ್ಡ್‌ನಲ್ಲಿ ಕಸ ಹಾಕುವುದನ್ನೇ ನಿಲ್ಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕಸ ವಿಲೇವಾರಿಯಾಗದೆ, ಬಿಬಿಎಂಪಿ ವಾಹನಗಳು ಕಸ ತುಂಬಿಕೊಂಡು ನಿಂತಲ್ಲೇ ನಿಂತಿವೆ. ಇದರಿಂದ ಕಸದ ದುರ್ವಾಸನೆ ಸ್ಥಳೀಯರನ್ನು ಹೈರಾಣಾಗಿಸಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಕಸವನ್ನು 9 ವರ್ಷಗಳಿಂದ ಮಿಟ್ಟಗಾನಹಳ್ಳಿಯಲ್ಲಿ ಡಂಪಿಂಗ್ ಮಾಡಲಾಗುತ್ತಿತ್ತು. ಆದರೆ ಇದೇ ಮಂಗಳವಾರದಿಂದ ಕಾಂಪ್ಯಾಕ್ಟ್‌ರ್‌ಗಳು ವಾಪಸ್ ಬಾರದೆ ತ್ಯಾಜ್ಯ ತುಂಬಿಕೊಂಡಿರುವ ಆಟೋ, ಟಿಪ್ಪರ್‌ಗಳು, ಲಾರಿಗಳು ಕೆಲವು ಬಡಾವಣೆಗಳು ಹಾಗೂ ರಸ್ತೆಗಳಲ್ಲೇ ನಿಂತಲ್ಲಿ ನಿಂತಿವೆ. ಇದರಿಂದ ಮಾಲಿನ್ಯ ಮಿತಿಮೀರಿದ್ದು, ಕಸದ ಸಮಸ್ಯೆ ಇನ್ನೂ 5 ರಿಂದ 6 ದಿನಗಳ ಕಾಲ ಮುಂದುವರೆಯುವ ಸಾಧ್ಯತೆಯಿದೆ.
ಗರಿಷ್ಠ ಹಂತ ತಲುಪಿ ವಾತಾವರಣ ಹದಗೆಟ್ಟಿದ್ದರೂ ಪಾಲಿಕೆ ಮಾತ್ರ ಇನ್ನೂ ಕಸ ಸುರಿಯುವುದನ್ನು ಮುಂದುವರೆಸಿದೆ. ಹೀಗಾಗಿ ಕಣ್ಣೂರು, ಮಿಟ್ಟಗಾನಹಳ್ಳಿ ಕಲ್ಲು ಕ್ವಾರಿಯಲ್ಲಿ ಬಿಬಿಎಂಪಿ ಕಸ ಸುರಿಯುವುದನ್ನು ವಿರೋಧಿಸಿ, ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದ 400ಕ್ಕೂ ಹೆಚ್ಚು ಕಸ ವಿಲೇವಾರಿ ಲಾರಿಗಳು ಸಾಲುಗಟ್ಟಿ ನಿಂತಿವೆ. ಜತೆಗೆ ಇಲ್ಲಿ ಸಂಚಾರ ದಟ್ಟಣೆ ಕೂಡ ಹೆಚ್ಚಾಗುತ್ತಿದ್ದು, ಇದರಿಂದ ಶಾಲೆ-ಕಾಲೇಜುಗಳಿಗೆ, ಕೆಲಸಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ.
ಸ್ಥಳ ಪರಿಶೀಲನೆ ನಡೆಸಲಿರುವ ಪಂಚಾಯಿತಿ ಅಧಿಕಾರಿಗಳು:
ಮಂಗಳವಾರ ಬೆಳಗ್ಗೆಯಿಂದಲೇ ಕಾಂಪ್ಯಾಕ್ಟ್‌ರ್‌ಗಳು ತ್ಯಾಜ್ಯ ವಿಲೇವಾರಿಯಾಗದಂತೆ ತಡೆಹಿಡಿದಿರುವ ಸ್ಥಳೀಯರ ಜೊತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ ಲತಾ ಕುಮಾರಿ ಸಭೆ ನಡೆಸಿದ್ದಾರೆ. ಆ ವೇಳೆ ಅವರು, ಮಾ.19 ರಂದು ಸ್ಥಳ ಪರಿಶೀಲನೆ ಮಾಡಿ, ಅಲ್ಲಿನ ಸಮಸ್ಯೆ ತಿಳಿದು ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.