ಬೆಂಗಳೂರು: ಡಿವಿಜಿಯವರ ತತ್ವ ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸಬೇಕಿದೆ ಶಿಕ್ಷಣ ತಜ್ಞ ಡಾ. ಗುರುರಾಜ ಕರಜಗಿ ಹೇಳಿದರು.
ಡಿವಿಜಿ ಬಳಗ ಪ್ರತಿಷ್ಠಾನದ ವತಿಯಿಂದ ಭಾನುವಾರ ನಗರದ ದಿ ಮಿಥಿಕ್ ಸೊಸೈಟಿಯಲ್ಲಿ ಆಯೋಜಿಸಿದ್ದ, ಲೇಖಕ ಸತ್ಯೇಶ್ ಎನ್ ಬೆಳ್ಳೂರ್ ಬರೆದ `ಎಲ್ಲರೊಳಗೊಂದಾಗು ಮಕ್ಕಳಿಗಾಗಿ ಡಿವಿಜಿ’ ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿ ಅವರು ಇಂದಿನ ದಿನಮಾನದಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ ಮಕ್ಕಳಿಗೆ ಕನ್ನಡದಲ್ಲಿ ಓದಲು, ಬರೆಯಲು ಕಷ್ಟವಾಗುತ್ತಿದೆ. ಎಷ್ಟೋ ಮಕ್ಕಳಿಗೆ ಡಿವಿಜಿ ತರಹದ ಮೇರು ವ್ಯಕ್ತಿತ್ವಗಳ ತತ್ವ ಆದರ್ಶಗಳ ಬಗ್ಗೆ ಅರಿವೇ ಇಲ್ಲದಂತಾಗಿದೆ. ಈ ನಿಟ್ಟಿನಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಬಾಲ್ಯದಲ್ಲಿಯೇ ಮೇರು ವ್ಯಕ್ತಿಗಳ ಮೌಲ್ಯಗಳನ್ನು ಕಲಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಸತ್ಯೇಶ್ ಎನ್ ಬೆಳ್ಳೂರ್ ಅವರು ಡಿಜಿವಿಯವರ ವಿಚಾರಧಾರೆಗಳು, ತತ್ವಗಳನ್ನು ಮತ್ತು ಅವರ ಆದರ್ಶಗಳನ್ನು ಇಂದಿನ ಮಕ್ಕಳಿಗೆ ತಿಳಿಸುವ ಪ್ರಯತ್ನ ಮಾಡಿದ್ದು, ಮಕ್ಕಳನ್ನು ನೆನಪಿನಲ್ಲಿಟ್ಟುಕೊಂಡು ಇದರಲ್ಲಿ ಹಲವಾರು ರೂಪಕಗಳನ್ನು ನೀಡಿದ್ದಾರೆ. ಭಾಷೆಗೆ ಮಿತಿಯಿದೆ ಆದರೆ ಚಿತ್ರಕ್ಕೆ ಮಿತಿಯಿಲ್ಲ. ಒಂದು ಚಿತ್ರ ನಮ್ಮ ಮನಸ್ಸಿನ ಮೇಲೆ ಪರಿಣಾಮ ಬೀರಿದಷ್ಟು ಪದಗಳು ಬೀರುವುದಿಲ್ಲ. ಚಿತ್ರಕ್ಕೆ ಇರುವಂತಹ ಆಯಾಮ ಭಾಷೆಗೆ ಇರುವುದಿಲ್ಲ ಎಂದು ಹೇಳಿದರು.
ಜಗತ್ತಿನಲ್ಲಿ ನಡೆಯುತ್ತಿರುವುದು ಎಲ್ಲವೂ ಕೆಟ್ಟದ್ದು ಎಂದು ಭಾವಿಸದೇ ಸಕಾರಾತ್ಮಕ ಆಲೋಚನೆಗಳನ್ನು ರೂಡಿಸಿಕೊಳ್ಳಬೇಕು. ಆಗ ಮಾತ್ರ ಯಶಸ್ಸು ಕಾಣಲು ಸಾಧ್ಯ. ಡಿವಿಜಿಯವರ ಕೇತಕಿ ವನ, ವನಸುಮ, ದಾರಿಗರ ಹಾಡು ಕೃತಿಗಳು ಸಾಕ್ಷಿಯಾಗಿದೆ. ಪ್ರತಿಯೊಬ್ಬರ ಜೀವನದಲ್ಲಿ ಕಷ್ಟ- ಕಾರ್ಪಣ್ಯ, ರೋಗ ಸರ್ವೇ ಸಾಮಾನ್ಯವಾಗಿದ್ದು, ಎಲ್ಲರೊಂದಿಗೆ ಸ್ನೇಹ-ಪ್ರೀತಿಯಿಂದ ಬೆರೆತರೆ ಯಾವುದೇ ಶ್ರೀಮಂತಿಕೆ ಬೇಕಿಲ್ಲ ಎನ್ನುವುದು ಅವರ ಕೃತಿಗಳ ಸರವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರೇಕ್ಷಾ ಪತ್ರಿಕೆಯ ಸಹ ಸಂಪಾದಕ ಬಿ. ಏನ್ ಶಶಿಕಿರಣ ಅವರು ಮಾತನಾಡಿ ಡಿವಿಜಿಯವರು ಕನ್ನಡದ ಹೆಸರಾಂತ ಸಾಹಿತಿ ಎಂದು ಗುರುತಿಸಲಾಗಿದ್ದು, ಎಷ್ಟೋ ಜನರಿಗೆ ಇಂಗ್ಲಿಷ್ ನಲ್ಲಿ ಲೇಖನ ಬರೆದಿರುವುದೆ ಗೊತ್ತೆ ಇರದ ಕಾಲದಲ್ಲಿ ರಾಜಕೀಯ, ಪತ್ರಿಕೋದ್ಯಮ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಇಂಗ್ಲಿಷ್ ನಲ್ಲಿ ಲೇಖನಗಳನ್ನು ಬರೆದು ಓದುಗರಿಗೆ ನೀಡಿದ್ದಾರೆ ಎಂದು ಸಮರ್ಥಿಸಿಕೊಂಡರು.
ಡಿವಿಜಿ ಬಳಗ ಪ್ರತಿಷ್ಠಾನದ ಸಂಚಾಲಕ ಸಿ ಕನಕರಾಜು ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃತಿಕಾರ ಸತ್ಯೇಶ್ ಎನ್ ಬೆಳ್ಳೂರ್ ಅವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ರೋಟರಿ ಡಿವಿಜಿ ಅಭಿಮಾನಿಗಳ ಬಳಗದ ನಾ. ಉದಯ್ ಶಂಕರ್, ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ನ ವಿನಯ್ ಕುಮಾರ್ ಎಂ ಅವರಿಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.