ಬೆಂಗಳೂರು: ವಯೋವೃದ್ಧ ಅತ್ತೆ-ಮಾವನ ಮೇಲೆ ನಗರದ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯೆಯೊಬ್ಬರು ಅಮಾನಮೀಯವಾಗಿ ಹಲ್ಲೆ ಮಾಡಿ, ಮಕ್ಕಳ ಜತೆಗೂಡಿ ಕಿರುಕುಳ ಕೊಟ್ಟಿರುವ ಪ್ರಕರಣದ ಸಂಬಂಧ ಆಕೆಯ ವಿರುದ್ಧ ವೈದ್ಯಕೀಯ ಶಿಕ್ಷಣ ಇಲಾಖೆ ಷೋಕಾಸ್ ನೋಟಿಸ್ ಜಾರಿ ಮಾಡಿರುವ ಬೆನ್ನಲ್ಲೇ ಇದೀಗ ಪೊಲೀಸರ ಎದುರು ಪ್ರಿಯದರ್ಶಿನಿ ಹೇಳಿಕೆ ನೀಡಿದ್ದಾರೆ.
ವಯೋವೃದ್ದ ಅತ್ತೆ-ಮಾವನ ಮೇಲೆ ಹಲ್ಲೆ ನಡೆಸಿದ ಆರೋಪದ ಅಡಿಯಲ್ಲಿ ವಿಕ್ಟೋರಿಯಾ ಆಸ್ಪತ್ರೆ ವೈದ್ಯೆ ಪ್ರಿಯದರ್ಶಿನಿ ವಿರುದ್ಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎ್‌ಐಆರ್ ದಾಖಲಾಗಿತ್ತು. ಈ ಸಂಬಂಧ ಪೊಲೀಸ್ ಠಾಣೆಗೆ ವಿಚಾರಣೆ ಹಾಜರಾಗಿದ್ದ ಪ್ರಿಯದರ್ಶಿನಿ ಗಲಾಟೆಗೆ ಕಾರಣ ಏನು ಎಂಬುದನ್ನು ವಿವರಿಸಿದ್ದಾರೆ.
ನನ್ನ ಪುತ್ರ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಮುಂದಿನ ಓದಿನ ಕುರಿತು ಚರ್ಚೆ ನಡೆಸಲು ನಾನು ಅನ್ನಪೂರ್ಣೇಶ್ವರಿ ನಗರದಲ್ಲಿ ನೆಲೆಸಿರುವ ಪುತ್ರನ ತಂದೆಯ ನಿವಾಸಕ್ಕೆ ಆಗಮಿಸಿದ್ದೆ, ಈ ವೇಳೆಯಲ್ಲಿ ನನ್ನ ಬಳಿಯಿದ್ದ ಸಣ್ಣ ಮಗುವನ್ನು ಕಂಡು ಅನುಮಾನದಿಂದ ಅತ್ತೆ-ಮಾವ ಕೊಂಕು ಮಾತಾಡಿದ್ದರು. ಈ ಮಾತಿನಿಂದ ಬೇಸತ್ತು ಹೋಗಿದ್ದೆ. ಮತ್ತಷ್ಟು ಕೊಂಕು ಮಾತನಾಡಿದ್ದರಿಂದ ಜಗಳ ವಿಕೋಪಕ್ಕೆ ತಿರುಗಿತು ಎಂದು ವೈದ್ಯೆ ಹೇಳಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ಷೋಕಾಸ್ ನೋಟಿಸ್ ಜಾರಿ:
ಪ್ರಿಯದರ್ಶಿನಿ ಅತ್ತೆ ಮಾವನ ಮನೆಗೆ ತೆರಳಿ ಹಲ್ಲೆ ನಡೆಸಿರುವ ಸಂಬಂಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿದ ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೋಶಿನ್, ಇದು ಇಲಾಖೆಗೆ ತೀವ್ರ ಮುಜುಗರ ತರುವ ವಿಷಯವಾಗಿದ್ದು, ಕೂಡಲೇ ವೈದ್ಯೆ ಪ್ರಿಯದರ್ಶಿನಿಗೆ ಷೋಕಾಸ್ ನೋಟಿಸ್ ನೀಡಿ, ವಿವರಣೆ ಪಡೆಯಿರಿ ಎಂದು ಸೂಚಿಸಿದ್ದರು. ಇದರ ಬೆನ್ನಲ್ಲೇ ಇದೀಗ ಡಿಎಂಇ ಡಾ. ಸುಜಾತಾ ರಾಥೋಡ್ ನೋಟಿಸ್ ಜಾರಿ ಮಾಡಿದ್ದಾರೆ.