News

ರಾಜ್ಯದ ಇತಿಹಾಸದಲ್ಲೇ ಹೊಸ ದಾಖಲೆ; 18 ಸಾವಿರ ಮೆ.ವ್ಯಾ ದಾಟಿದ ವಿದ್ಯುತ್ ಬೇಡಿಕೆ

Share It

ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ದಾಖಲೆ ಮಟ್ಟಕ್ಕೆ ಏರಿಕೆಯಾಗಿದ್ದು, ಕಳೆದ ಎರಡು ತಿಂಗಳಲ್ಲಿ ಗರಿಷ್ಠ ಬೇಡಿಕೆ ಅವಧಿ (ಪೀಕ್ ಅವರ್ ಡಿಮಾಂಡ್) 18 ಸಾವಿರ ಮೆಗಾವ್ಯಾಟ್ ದಾಟಿದೆ. ಏಪ್ರಿಲ್ ತಿಂಗಳಲ್ಲಿ 18,500 ಮೆಗಾವ್ಯಾಟ್ ತಲುಪುವ ಸಾಧ್ಯತೆ ಕೂಡ ಇದೆ.

ಸೋಮವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಈ ವಿಷಯ ತಿಳಿಸಿದ ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಮತ್ತು ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ, ಕಳೆದ ಫೆಬ್ರವರಿಯಲ್ಲಿ ವಿದ್ಯುತ್ ಬೇಡಿಕೆ ಗರಿಷ್ಠ ಬೇಡಿಕೆ ಅವಧಿಯಲ್ಲಿ 18,350 ಮೆಗಾ ವ್ಯಾಟ್ ತಲುಪಿದ್ದರೆ, ಮಾರ್ಚ್ ತಿಂಗಳಲ್ಲಿ 18,395 ಮೆಗಾ ವ್ಯಾಟ್ ಗೆ ಏರಿಕೆಯಾಗಿದೆ. ಮಾ. 7ರಂದು ಗರಿಷ್ಠ ವಿದ್ಯುತ್ ಬೇಡಿಕೆ 18,395 ಮೆಗಾ ವ್ಯಾಟ್ ತಲುಪಿತ್ತು ಎಂದು ಮಾಹಿತಿ ನೀಡಿದರು.

ಕೋವಿಡ್ ಬಳಿಕ ವಿದ್ಯುತ್ ಬೇಡಿಕೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಗರಿಷ್ಠ ವಿದ್ಯುತ್ ಬೇಡಿಕೆ 2020-21ನೇ ಸಾಲಿನಲ್ಲಿ 14,367 ಮೆಗಾವ್ಯಾಟ್ ಇದ್ದರೆ, 2021-22ರಲ್ಲಿ 14,818 ಮೆಗಾವ್ಯಾಟ್, 2022-23ರಲ್ಲಿ 15,828 ಮೆಗಾವ್ಯಾಟ್ ಇದ್ದರೆ, 2023-24ರಲ್ಲಿ 17,220 ಮೆಗಾವ್ಯಾಟ್ ಇತ್ತು. ಈ ಬಾರಿ 18,385 ಮೆಗಾವ್ಯಾಟ್ ಗೆ ಏರಿಕೆಯಾಗಿದೆ. ಅದೇ ರೀತಿ ಪ್ರಸ್ತುತ ಗರಿಷ್ಠ ವಿದ್ಯುತ್ ಬಳಕೆ 357 ಮಿಲಿಯನ್ ಯೂನಿಟ್ ಇದೆ ಎಂದು ವಿವರಿಸಿದರು.

ಗರಿಷ್ಠ ಬೇಡಿಕೆ ಅವಧಿಯಲ್ಲಿ 2024ರ ಏಪ್ರಿಲ್ ತಿಂಗಳಲ್ಲಿ 16,985 ಮೆಗಾವ್ಯಾಟ್ ಬೇಡಿಕೆ ಬಂದಿದ್ದು, ಈ ವರ್ಷ 18,294 ಮೆಗಾವ್ಯಾಟ್  ತಲುಪುವ ಅಂದಾಜಿದೆ. ಅಂದರೆ ವಿದ್ಯುತ್ ಬೇಡಿಕೆಯಲ್ಲಿ ಶೇ. 8.1ರಷ್ಟು ಹೆಚ್ಚಳವಾಗಲಿದೆ. ಅದೇ ರೀತಿ 2024ರ ಮೇ ತಿಂಗಳಲ್ಲಿ 16,826 ಮೆಗಾವ್ಯಾಟ್ ಬೇಡಿಕೆ ಬಂದಿದ್ದು, ಈ ಬಾರಿ 17,122 ಮೆಗಾವ್ಯಾಟ್ ಗೆ ಏರಿಕೆಯಾಗುವ (ಶೇ. 1.8ರಷ್ಟು ಹೆಚ್ಚಳ) ಅಂದಾಜು ಮಾಡಲಾಗಿದೆ. ಅಲ್ಲದೆ, ವಿದ್ಯುತ್ ಬಳಕೆ ಪ್ರಮಾಣ ಏಪ್ರಿಲ್ ತಿಂಗಳಲ್ಲಿ 352 ಮಿಲಿಯನ್ ಯೂನಿಟ್ ಮತ್ತು ಮೇ ತಿಂಗಳಲ್ಲಿ 331 ಮಿಲಿಯನ್ ಯೂನಿಟ್ ತಲುಪುವ ನಿರೀಕ್ಷೆಯಿದೆ ಎಂದು ಹೇಳಿದರು.

ಬೇಡಿಕೆ ಪೂರೈಸಲು ಸಿದ್ಧತೆ:

ರಾಜ್ಯದಲ್ಲಿ ಏರಿಕೆಯಾಗಿರುವ ವಿದ್ಯುತ್ ಬೇಡಿಕೆಯನ್ನು ಪೂರೈಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. 2024ರ ಡಿಸೆಂಬರ್‌ನಿಂದ ಮೇ ತಿಂಗಳವರೆಗೆ ಬೇಡಿಕೆಗೆ ಅನುಗುಣವಾಗಿ ಉತ್ತರ ಪ್ರದೇಶದಿಂದ 100ರಿಂದ 1,400 (ಗರಿಷ್ಠ ಬೇಡಿಕೆ ಅವಧಿಯಲ್ಲಿ) ಮೆಗಾವ್ಯಾಟ್ ವಿನಿಮಯ ಆಧಾರದ ಮೇಲೆ ವಿದ್ಯುತ್ ಪಡೆಯಲಾಗುತ್ತಿದೆ. ಅದೇ ರೀತಿ ಜನವರಿಯಿಂದ ಏಪ್ರಿಲ್ ಅಂತ್ಯದವರೆಗೆ ಪಂಜಾಬ್ ನಿಂದ 200ರಿಂದ 531 ಮೆಗವ್ಯಾಟ್ ವಿದ್ಯುತ್ತನ್ನು ವಿನಿಮಯ ಆಧಾರದ ಮೇಲೆ ಪಡೆಯಲು ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದರು.

ಇತರ ರಾಜ್ಯಗಳೊಂದಿಗೆ ಒಪ್ಪಂದ:

ಮಾ. 1ರಿಂದ 15ರವರೆಗೆ ಕೂಡಗಿಯಲ್ಲಿರುವ ಎನ್.ಟಿ.ಪಿ.ಸಿಯಿಂದ 310 ಮೆಗಾವ್ಯಾಟ್ ಹೆಚ್ಚುವರಿ ವಿದ್ಯುತ್ ಪಡೆಯಲಾಗುತ್ತಿತ್ತು. ಮಾ. 15ರಿಂದ ಇನ್ನೂ ಹೆಚ್ಚುವರಿಯಾಗಿ 100 ಮೆ.ವ್ಯಾ(ಒಟ್ಟು 410 ಮ.ವ್ಯಾ) ವಿದ್ಯುತ್ ಪಡೆಯಲಾಗಿದೆ. ಜತೆಗೆ ಮಾರ್ಚ್ ತಿಂಗಳಿನಿಂದ ಮೇ ಅಂತ್ಯದವರೆಗೆ ಇಂಧನ ಸುರಕ್ಷತೆ ನೀತಿಯಡಿ ಇತರ ರಾಜ್ಯಗಳಿಂದ ಮಾಸಿಕ 1000 ಮೆ.ವ್ಯಾ ವಿದ್ಯುತ್ ಪಡೆಯಲು ಪಿಸಿಕೆಎಲ್ ಒಪ್ಪಂದ ಮಾಡಿಕೊಂಡಿದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳಿಗೆ ಸಮಸ್ಯೆಯಾಗದಂತೆ ಸಿಂಗಲ್  ಫೇಸ್ ಸಪ್ಲೈ:

ರೈತರಿಗೆ ದಿನದ 7 ಗಂಟೆ ತ್ರಿ ಫೇಸ್ ವಿದ್ಯುತ್ ಪೂರೈಸಲು ಕ್ರಮ ವಹಿಸಲಾಗಿದೆ. ಅನೇಕ ಕಡೆಗಳಲ್ಲಿ ರೈತರ ಕೃಷಿ ಪಂಪ್ ಸೆಟ್ ಗಳಿಗೆ ಸೋಲಾರ್ ವಿದ್ಯುತ್ ಒದಗಿಸಲಾಗುತ್ತಿದೆ. ಕೆಲವೆಡೆ 7 ಗಂಟೆ ತ್ರಿ ಫೇಸ್ ವಿದ್ಯುತ್ ಪೂರೈಸಲು ಸಮಸ್ಯೆಯಾಗದಂತೆ ಬೆಳಗ್ಗೆ ಮತ್ತು ಸಂಜೆ ವೇಳೆ ವಿದ್ಯುತ್ ಪೂರೈಸಲಾಗುತ್ತದೆ. ವಿದ್ಯಾರ್ಥಿಗಳಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಸಂಜೆ 6ರಿಂದ ಬೆಳಗ್ಗೆ 6 ಗಂಟೆಯವರೆಗೆ ಸಿಂಗಲ್  ಫೇಸ್ ವಿದ್ಯುತ್ ಒದಗಿಸಲಾಗುತ್ತಿದೆ ಎಂದು ಹೇಳಿದರು.


Share It

You cannot copy content of this page