ಬೆಂಗಳೂರು: ನಗರದ ಕಬ್ಬನ್ ಉದ್ಯಾನವನದಲ್ಲಿರುವ ರಾಜ್ಯ ಬಾಲ ಭವನ ಸೊಸೈಟಿ ವತಿಯಿಂದ 5 ರಿಂದ 16 ವರ್ಷದ ಮಕ್ಕಳಿಗೆ ಬೇಸಿಗೆ ಶಿಬಿರ ಏಪ್ರಿಲ್ 16 ರಿಂದ ಮೇ 20 ರವರೆಗೆ ಆಯೋಜಿಸಲಾಗಿದೆ.
ಶಿಬಿರ ಕಬ್ಬನ್ ಪಾರ್ಕ್ ನ ಕಸ್ತೂರಬಾ ರಸ್ತೆಯ ಬಾಲ ಭವನ ಸೊಸೈಟಿಯಲ್ಲಿ ನಡೆಯಲಿದ್ದು, ಶಿಬಿರದಲ್ಲಿ ಭಾಗವಹಿಸುವ 5 ರಿಂದ 7 ವರ್ಷದ ಮಕ್ಕಳಿಗೆ 3 ಚಟುವಟಿಕೆಗಳಿಗೆ 750 ರೂಪಾಯಿ ಹಾಗೂ 8 ರಿಂದ 16 ವರ್ಷದ ಮಕ್ಕಳ 5 ಚಟುವಟಿಕೆಗಳಿಗೆ 1000 ರೂಪಾಯಿ ನಿಗದಿಪಡಿಸಲಾಗಿದ್ದು, ಇದರಲ್ಲಿ ಶಿಬಿರದ ಸಾಮಗ್ರಿಗಳು ಒಳಗೊಂಡಿವೆ.
ಶಿಬಿರದಲ್ಲಿ ಸೃಜನಾತ್ಮಕ ಹಾಗೂ ಕ್ರಿಯಾತ್ಮಕ ಚಟುವಟಿಕೆಗಳಾದ ಚಿತ್ರಕಲೆ, ಕರಕುಶಲ ಕಲೆ. ಜಾನಪದ ಗೀತೆ, ಜಾನಪದ ನೃತ್ಯ ಜೇಡಿಮಣ್ಣಿನ ಕಲೆ, ಕರಾಟೆ, ಯೋಗ, ಕೀಬೋರ್ಡ್, ತಬಲ ಮತ್ತು ಫೈಯರ್ ಫೈಟಿಂಗ್, ಸ್ಥಳೀಯ ಆಟಗಳಾದ ಗೋಲಿ ಬುಗುರಿ ಚಿನ್ನಿದಾಂಡು, ಲಗೋರಿ ಮತ್ತು ಕಬ್ಬಡಿ ಒಳಗೊಂಡಿರುತ್ತದೆ. ಕಸದಿಂದ ರಸ ರಂಗ ತರಬೇತಿ, ಇತ್ಯಾದಿ ಕಲಾ ಕ್ಷೇತ್ರಗಳಲ್ಲಿ ಅನುಭವ ಹೊಂದಿರುವ ಅರ್ಹ ಕಲಾ ಬೋಧಕರಿಂದ ತರಬೇತಿಯನ್ನು ನೀಡಲಾಗಲಿದೆ.
ನಿಗದಿತ ಅರ್ಜಿ ಫಾರಂಗಳನ್ನು ಏಪ್ರಿಲ್ 5 ರಿಂದ ಬೆಳಿಗ್ಗೆ 11 ರಿಂದ ಸಂಜೆ 5 ರವರೆಗೆ (ಸರ್ಕಾರಿ ರಜಾದಿನಗಳನ್ನು ಹೊರತುಪಡಿಸಿ) ಕಬ್ಬನ್ ಉದ್ಯಾನವನದಲ್ಲಿನ ಬಾಲ ಭವನದಲ್ಲಿ ಪಡೆಯಬಹುದಾಗಿದೆ. ಮೊದಲು ಬಂದವರಿಗೆ ಮೊದಲ ಆದ್ಯತೆ ಇರಲಿದೆ. ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳು ಅವಶ್ಯ ದಾಖಲೆಗಳನ್ನು ಒದಗಿಸಿದ್ದಲ್ಲಿ ನಿಗದಿತ ಶುಲ್ಕದಲ್ಲಿ ಶೇಕಡ 50% ರಷ್ಟು ಶುಲ್ಕ ರಿಯಾಯಿತಿ ಪಡೆಯಬಹುದಾಗಿದೆ. 5 ರಿಂದ 16 ವರ್ಷದೊಳಗಿನ ವಿಶೇಷ ಚೇತನ ಮಕ್ಕಳು ಮತ್ತು ಸೌಲಭ್ಯ ವಂಚಿತ ಮಕ್ಕಳು ಸಂಬಂಧಪಟ್ಟ ದಾಖಲೆ ನೀಡಿ ಉಚಿತ ಪ್ರವೇಶ ಪಡೆಯಬಹುದಾಗಿದೆ. ಅಲ್ಲದೇ ಬಾಲ ಭವನದ ಸದಸ್ಯತ್ವ ಪಡೆದಿರುವ ಮಕ್ಕಳಿಗೆ ಶೇಕಡ 25% ರಷ್ಟು ಶುಲ್ಕ ರಿಯಾಯಿತಿ ನೀಡಲಾಗುವುದು.
ಶಿಬಿರದ ಅವಧಿಯಲ್ಲಿ ಮೊಬೈಲ್ ಫೋನ್ ಬಳಕೆಯನ್ನು ಕಡ್ಡಾಯವಾಗಿ ನಿರ್ಧರಿಸಿದೆ. ಎಲ್ಲಾ ಭಾನುವಾರಗಳಂದು ಮತ್ತು ಸರ್ಕಾರಿ ರಜೆ ದಿನಗಳಲ್ಲಿ ಬೇಸಿಗೆ ಶಿಬಿರದ ಚಟುವಟಿಕೆಗಳು ಇರುವುದಿಲ್ಲ. ಶಿಬಿರದ ಸಮಾರೋಪ ಸಮಾರಂಭವನ್ನು ಮೇ 20 ರಂದು ಏರ್ಪಡಿಸಲಾಗಿದೆ.
ಆಸಕ್ತರು, ಹೆಚ್ಚಿನ ಮಾಹಿತಿಗಾಗಿ ಹಾಗೂ ನೋಂದಣಿಗಾಗಿ ಕಾರ್ಯದರ್ಶಿಗಳು, ಬಾಲ ಭವನ ಸೊಸೈಟಿ, ಕಬ್ಬನ್ ಉದ್ಯಾನವನ, ಬೆಂಗಳೂರು, ಇಲ್ಲಿ ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ 080-22864189 ರ ಮೂಲಕ ಸಂಪರ್ಕಿಸಬಹುದಾಗಿದೆ ಎಂದು ಬಾಲಭವನ ಸೊಸೈಟಿಯ ಕಾರ್ಯದರ್ಶಿಗಳು ತಿಳಿಸಿದ್ದಾರೆ.