Law News

ಮೂಟ್ ಕೋರ್ಟ್ ಸ್ಪರ್ಧೆಗಳು ಕಾನೂನು ವಿದ್ಯಾರ್ಥಿಗಳಿಗೆ ಸಹಕಾರಿ: ಹೈಕೋರ್ಟ್ ನ್ಯಾಯಮೂರ್ತಿ ರಂಗಸ್ವಾಮಿ ನಟರಾಜ್

Share It

ಬೆಂಗಳೂರು: ವೈದ್ಯರು, ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪ್ರಾಕ್ಟಿಕಲ್ ಮಾದರಿಯ ಕಲಿಕೆಗೆ ಸಾಕಷ್ಟು ಅವಕಾಶಗಳಿದ್ದು, ಅದೇ ಮಾದರಿಯಲ್ಲಿ ಕಾನೂನು ವಿದ್ಯಾರ್ಥಿಗಳಿಗೆ ಈ ರೀತಿಯ ಅವಕಾಶಗಳು ಕಡಿಮೆ ಇವೆ. ಇದಕ್ಕೆ ಮೂಟ್ ಕೋರ್ಟ್ ಸ್ಪರ್ಧೆಗಳು ಪರಿಹಾರವಾಗಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ರಂಗಸ್ವಾಮಿ ನಟರಾಜ್ ಹೇಳಿದರು.

ಬಿ.ಎಂ.ಎಸ್ ಕಾನೂನು ಮಹಾವಿದ್ಯಾಲಯದಲ್ಲಿ ನಡೆದ ಮೂರು ದಿನಗಳ ಬಿ.ಎಂ. ಶ್ರೀನಿವಾಸಯ್ಯ ಸ್ಮರಣಾರ್ಥ 10 ನೇ ರಾಷ್ಟ್ರೀಯ ಅಣಕು ನ್ಯಾಯಾಲಯ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನ್ಯಾಯಾಲಯದಲ್ಲಿ ವಾದಮಾಡುವಾಗ ಎದುರಾಗುವ ಸವಾಲುಗಳು ಮತ್ತು ಅದರ ಸಾಕಷ್ಟು ಮಜಲುಗಳನ್ನು ಅರಿಯಲು ಮೂಟ್ ಕೋರ್ಟ್ ಗಳು ವಿದ್ಯಾರ್ಥಿಗಳಿಗೆ ಸಹಕಾರಿಯಾಗಿವೆ. ಮುಂದೆ ವೃತ್ತಿನಿರತರಾದ ಕಕ್ಷಿದಾರರಾದಾಗ ಹಕ್ಕುಗಳನ್ನು ರಕ್ಷಿಸಲು ಸಹ ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಕಾನೂನಿನ ಪ್ರಕ್ರಿಯೆಗಳಿಲ್ಲಿ ಇನ್ನಷ್ಟು ಹೊಸತನಗಳು ಮತ್ತು ಆವಿಷ್ಕಾರಗಳಿಗೆ ಅವಕಾಶವಿದ್ದು ಇದನ್ನು ಹೊಸ ಪೀಳಿಗೆಯ ಕಾನೂನು ಪದವೀಧರರು ಮಂಗಂಡು ಮುಂದುವರಿಯಬೇಕಿದೆ. ಈ ನಿಟ್ಟಿನಲ್ಲಿ ಬಿ. ಎಂ. ಎಸ್ ಕಾನೂನು ಮಹಾವಿದ್ಯಾಲಯ ಆಯೋಜಿಸಿರುವ ಮೂಟ್ ಕೋರ್ಟ್ ಸ್ಪರ್ಧೆಗಳು ವಿದ್ಯಾರ್ಥಿಗಳ ಮನೋಬಲವನ್ನು ಹೆಚ್ಚಿಸುವುದರ ಜೊತೆಗೆ ಅವರ ವೃತ್ತಿಪರ ಜೀವನಕ್ಕೆ ದಾರಿದೀಪವಾಗಿ ಹೊರಹೊಮ್ಮಲಿದೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದರು.

ಹಿರಿಯ ವಕೀಲರಾದ ಸುಧೀಶ್ ಪೈ ಮಾತನಾಡಿ, ಕಲಿಕೆ ಎನ್ನುವುದು ಜೀವನದುದ್ದಕ್ಕೂ ನೆಡೆಯುವ ಪ್ರಕ್ರಿಯೆಯಾಗಿದೆ. ಪ್ರಖ್ಯಾತ ವಕೀಲರಾದ ನಾನಿ ಪಲ್ಕೀವಾಲಾ ಅವರು 92 ವರ್ಷದಲ್ಲಿಯೂ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಆದ್ದರಿಂದ ವಿದ್ಯಾರ್ಥಿಗಳು ಕಲಿಕೆಯಲ್ಲಿ ಸಂತಸವನ್ನು ಕಂಡುಕೊಂಡು ಮುಂದುವರಿಯಬೇಕು. ಯಾವುದೇ ಷರತ್ತುಗಳನ್ನು ಇಟ್ಟುಕೊಳ್ಳದೇ ಕಲಿಕೆಯನ್ನುಮುಂದುವರಿಸಬೇಕು ಎಂದು ಕರೆ ನೀಡಿದರು.

ಮೂಟ್ ಕೋರ್ಟ್ ಸ್ಪರ್ಧೆಯಲ್ಲಿ ಅಲೆನ್ಸ್ ಕಾನೂನು ಮಹಾವಿದ್ಯಾಲಯ ಮಾಹಿ ಶ್ರಿವಾಸ್ತವ, ಪ್ರಿಯ ಚಂದಲೇಖರ್, ಅನೌಸ್ಕ ಕುಮಾರ್ ಪ್ರಥಮ ಬಹುಮಾನವನ್ನು ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಬಿ.ಎಂ.ಎಸ್ ಕಾನೂನು ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಸಹನಾ ಪ್ಲೋರೆನ್ಸ್ ಗಣ್ಯರನ್ನು ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ರಾನಿಯಲ್ ನಿಯಡ ವಂದನಾರ್ಪಣೆ ಸಲ್ಲಿಸಿದರು. ಎನ್.ಎಲ್.ಎಸ್.ಐ.ಯು ನಿವೃತ್ತ ಪ್ರಾಧ್ಯಾಪಕ ಡಾ ಎಂ.ಕೆ. ರಮೇಶ್, ಬಿ.ಎಂ.ಎಸ್ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಎಫ್. ಎನ್ ಅನಿತಾ ಡಿಸೋಜಾ ಉಪಸ್ಥಿತರಿದ್ದರು.


Share It

You cannot copy content of this page