ಬೆಂಗಳೂರು: ಕಾವೇರಿ ನೀರಿನ ಸಂಪರ್ಕವನ್ನು ಪಡೆಯುವ ನಿಟ್ಟಿನಲ್ಲಿ, ಒಮ್ಮೆಲೆ ಹಣ ಪಾವತಿಸಲು ಸಾಧ್ಯವಾಗದೇ ಇರುವಂತಹ ಅಪಾರ್ಟ್‌ಮೆಂಟ್ ಅಸೋಷಿಯೇಷನ್‌ಗಳಿಗೆ ಹಾಗೂ ಕಟ್ಟಡ ಮಾಲೀಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಸಮಾನ ಕಂತುಗಳಲ್ಲಿ (ಇಎಂಐ) ಶುಲ್ಕ ಪಾವತಿಸುವ ಅವಕಾಶವನ್ನು ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಯೋಜಿಸಿದೆ.
ಬೆಂಗಳೂರು ನಗರದ ಎಲ್ಲಾ ನಾಗರೀಕರಿಗೂ ಶುದ್ದ ಹಾಗೂ ಬಿಐಎಸ್ ಪ್ರಾಮಾಣೀಕೃತ ಕುಡಿಯುವ ನೀರನ್ನು ಒದಗಿಸುವ ಉದ್ದೇಶದಿಂದ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಏಪ್ರಿಲ್ 15 ರ ನಂತರ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಈ ಯೋಜನೆಗೆ ಚಾಲನೆ ನೀಡಲಿದ್ದಾರೆ.
ಸಮಾನ ಕಂತುಗಳ ಮೂಲಕ ಕಾವೇರಿ ನೀರಿನ ಸಂಪರ್ಕ ಪಡೆಯುವ ಸುವರ್ಣಾವಕಾಶ ಇದಾಗಿದೆ. ಅಪಾರ್ಟ್‌ಮೆಂಟ್ ಅಸೋಷಿಯೇಷನ್‌ಗಳು/ ಮನೆಗಳ ಮಾಲೀಕರು ಈ ಸುವರ್ಣವಕಾಶವನ್ನು ಬಳಸಿಕೊಂಡು 12 ತಿಂಗಳ ಸಮಾನ ಕಂತುಗಳಲ್ಲಿ ಶುಲ್ಕ ಪಾವತಿಸುವ ಮೂಲಕ ಸಂಪರ್ಕ ಪಡೆದುಕೊಳ್ಳಬಹುದಾಗಿದೆ. ಏಪ್ರಿಲ್ ಕೊನೆಯ ವಾರದಲ್ಲಿ ಪ್ರಾರಂಭವಾಗಲಿರುವ ಈ ಯೋಜನೆಗೆ ಎರಡು ತಿಂಗಳ ಅವಕಾಶ ಇರಲಿದೆ.