ಬೆಂಗಳೂರು: ತಂತ್ರಜ್ಞಾನ ಬೆಳವಣಿಗೆಯಿಂದ ಯಾವುದೋ ದೇಶದಲ್ಲಿನ ವ್ಯಕ್ತಿ ಇನ್ನೊಂದು ದೇಶದ ಜನರನ್ನು ಹಿಡಿತಕ್ಕೆ ತೆಗೆದುಕೊಂಡು ಅಲ್ಲಿನ ಆರ್ಥಿಕ ವ್ಯವಸ್ಥೆಯನ್ನೇ ಹಾಳು ಮಾಡಬಹುದಾದ ಅಪಾಯವಿದೆ ಎಂದು ಬಸವನಗುಡಿ ಕ್ಷೇತ್ರದ ಶಾಸಕ ಎಲ್.ಎ.ರವಿ ಸುಬ್ರಹ್ಮಣ್ಯ ಅಭಿಪ್ರಾಯಪಟ್ಟರು.
ಶ್ರೀ ತ್ಯಾಗರಾಜ ಕೋ-ಆಪರೇಟಿವ್ ಬ್ಯಾಂಕ್, ಬೆಂಗಳೂರು ನಗರ ಪೊಲೀಸ್ ದಕ್ಷಿಣ ವಲಯದ ಸಹಯೋಗದೊಂದಿಗೆ ಎನ್.ಆರ್.ಕಾಲೊನಿಯ ಶ್ರೀರಾಮ ಮಂದಿರದ ಸಭಾಂಗಣದಲ್ಲಿ ಆಯೋಜಿಸಿದ್ದ ‘ಸೈಬರ್ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಭಿವೃದ್ಧಿ ಹೊಂದಿರುವ ಪ್ರಪಂಚದ ಯಾವುದೇ ದೇಶಕ್ಕೆ ಹೋಲಿಸಿದರೂ ನಮ್ಮ ದೇಶದಲ್ಲಿನ ಡಿಜಿಟಲ್ ವಹಿವಾಟು ಹೆಚ್ಚಾಗಿದೆ. ಹೀಗಿರುವಾಗ ಜನರು ಕೇವಲ ಒಂದು ಖಾತೆಯಲ್ಲಿ ಹಣ ಇರಿಸದೆ, ಎರಡು ಖಾತೆಗಳನ್ನು ನಿರ್ವಹಿಸಬೇಕು. ಜತೆಗೆ, ಯಾವ ಕಾರಣಕ್ಕೂ ವೈಯಕ್ತಿಕ ಮಾಹಿತಿಯನ್ನು ಇತರರಿಗೆ ನೀಡಬಾರದು. ತಂತ್ರಜ್ಞಾನ ಮುಂದುವರೆದಂತೆ ತೊಂದರೆಗಳು ಹೆಚ್ಚಾಗುವುದು ಸಹಜ. ಅವುಗಳಿಗೆ ಹೆದರಿ ಕುಳಿತುಕೊಳ್ಳದೆ, ತಂತ್ರಜ್ಞಾನವನ್ನು ಸದುಪಯೋಗಪಡಿಸಿಕೊಳ್ಳುವ ದಾರಿ ಹುಡುಕಿಕೊಳ್ಳಬೇಕು ಎಂದರು.
ಸಿಐಡಿ ಘಟಕದ ಸೈಬರ್ ಅಪರಾಧ ವಿಭಾಗದ ಉಪ-ರಕ್ಷಕ ಕೆ.ಎನ್.ಯಶವಂತ್‌ಕುಮಾರ್ ಮಾತನಾಡಿ, ನಾವು ಅನುಮತಿ ನೀಡದೆ ಯಾವುದೇ ಸೈಬರ್ ಅಪರಾಧಗಳು ನಮ್ಮನ್ನು ತೊಂದರೆಗೆ ಒಳಪಡಿಸಲು ಸಾಧ್ಯವಿಲ್ಲ. ಇಂದು ದುರಾಸೆ ಮತ್ತು ಜಾಗೃತಿಯ ಕೊರತೆಯಿಂದ ಅಕ್ಷರಸ್ಥರೇ ಸೈಬರ್ ಅಪರಾಧಗಳಿಗೆ ಬಲಿಯಾಗುತ್ತಿದ್ದಾರೆ. ಸೈಬರ್ ಅಪರಾಧಗಳ ಸ್ವರೂಪ ಬದಲಾದರೂ, ಅದರ ಮೂಲ ನೀವು ತಿಳಿಸಿಕೊಡುವ ಮಾಹಿತಿಯೇ ಆಗಿರುತ್ತದೆ. ಆದ ಕಾರಣ, ದಾಖಲೆ ಮತ್ತು ದತ್ತಾಂಶವನ್ನು ಭಧ್ರವಾಗಿ ಇಟ್ಟುಕೊಳ್ಳಬೇಕಿರುವುದು ಎಲ್ಲರ ಜವಾಬ್ದಾರಿ ಎಂದು ಕಿವಿಮಾತು ಹೇಳಿದರು.
ಈ ವೇಳೆ ಬನಶಂಕರಿ ಸೈಬರ್ ಅಪರಾಧ ವಿಭಾಗದ ಎಸಿಪಿ ವಿಜಯ್ ಹಡಗಲಿ, ಶ್ರೀ ತ್ಯಾಗರಾಜ ಕೋ-ಆಪರೇಟಿವ್ ಬ್ಯಾಂಕ್‌ನ ಅಧ್ಯಕ್ಷ ಡಾ. ಎಂ.ಆರ್.ವೆಂಕಟೇಶ್, ನಿರ್ದೇಶಕ ಆರ್.ವೀರಣ್ಣ, ಟಿ.ಕೆ.ಅಶ್ವತ್ಥನಾರಾಯಣ ಗೌಡ, ಎನ್.ಬಸವರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.