News

ಜಾತಿ ರಹಿತ ಬೌದ್ಧರಿಗೆ ಪ್ರತ್ಯೇಕ ಧರ್ಮದ ಕಾಲಂ ರಚಿಸಲು ಆಗ್ರಹ

Share It

ಬೆಂಗಳೂರು: ರಾಜ್ಯದಲ್ಲಿ ಮೇ 5 ರಿಂದ 17 ರವರೆಗೆ ಒಳ ಮೀಸಲಾತಿ ವರ್ಗಿಕರಣ ಮಾಡಲಾಗುತ್ತಿದ್ದು, ರಾಜ್ಯ ಸರ್ಕಾರ ಒಳಮೀಸಲಾತಿ ಸಮೀಕ್ಷೆ ದತ್ತಾಂಶದಲ್ಲಿ ಬೌದ್ಧ ಧರ್ಮದ ಕಾಲಂ ಸೃಷ್ಟಿಸಿಲ್ಲ ಹಾಗೂ ಜಾತಿ ರಹಿತ ಬೌದ್ಧರೆಂದು ಸೇರಿಸಲು ಯಾವುದೇ ದತ್ತಾಂಶ ಇಲ್ಲ. ಕೂಡಲೇ ಈ ಸಮಸ್ಯೆ ಬಗೆಹರಿಸಬೇಕು ಎಂದು ಭಾರತೀಯ ಬೌದ್ಧ ಮಹಾಸಭಾ ಒತ್ತಾಯಿಸಿದೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಭಾರತೀಯ ಬೌದ್ಧ ಮಹಾಸಭಾದ ಯುವ ಘಟಕದ ರಾಜ್ಯಾಧ್ಯಕ್ಷ ದರ್ಶನ ಸೋಮಶೇಖರ್, ಅಂಬೇಡ್ಕರ್ ಬುದ್ಧರ ಅನುಯಾಯಿಗಿದ್ದರು, ಅವರಂತೆ ನಾವೆಲ್ಲರೂ ಬೌದ್ಧ ಧರ್ಮವನ್ನು ಪರಿಪಾಲನೆ ಮಾಡುತ್ತಿದ್ದೇವೆ. ಜಾತಿ ರಹಿತವಾದ ಬೌದ್ಧ ಧರ್ಮವನ್ನು ಅನುಸರಿಸುತ್ತಿದ್ದೇವೆ. ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಗಳು, ಸಚಿವ ಡಾ. ಹೆಚ್. ಸಿ ಮಹಾದೇವಪ್ಪ ಅವರಿಗೆ ಈಗಾಗಲೇ ಮನವಿ ಮಾಡಿದ್ದರೂ ಸಹ ಬೌದ್ಧ ಧರ್ಮದ ಕಾಲಂ ಹಾಗೂ ಜಾತಿ ರಹಿತ ಎಂದು ಸೇರಿಸಲು ದತ್ತಾಂಶದಲ್ಲಿ ಹೊಸ ವಿಭಾಗ ರಚಿಸಿಲ್ಲ. ಈಗಾಗಲೇ ಒಳಮೀಸಲಾತಿಯ ಜನಗಣತಿಯ ಸಮೀಕ್ಷೆಯಲ್ಲಿ ಜಾತಿ ಹೆಸರನ್ನು ಬರಸದೇ ಇರುವವರನ್ನು ಬೌದ್ದರೆಂದು ಪರಿಗಣಿಸಬೇಕು ಹಾಗೂ ದತ್ತಾಂಶದಲ್ಲಿ ಸರಳಿಕರಣದ ದಾಖಲೆಗಳನ್ನು ಪಡೆಯುವಂತೆ ಕ್ರಮಕೈಗೊಳ್ಳಬೇಕು ಎಂದು ಹೇಳಿದ್ದಾರೆ.

ಬೌದ್ಧರಾದವರಿಗೆ ದತ್ತಾಂಶದಲ್ಲಿ ಸರಳಿಕರಣದ ದಾಖಲೆಗಳನ್ನು ಪಡೆಯಲು ಕ್ರಮ ತೆಗೆದುಕೊಳ್ಳಬೇಕು. ಇನ್ನು ಮುಂದೆ ನಮೂದಿಸಲ್ಪಟ್ಟ ಜಾತಿ ರಹಿತ ಬೌದ್ಧ ಧರ್ಮೀಯರಿಗೆ ಜನಸಂಖ್ಯೆ ಗಾತ್ರಕ್ಕೆ ಅನುಗುಣವಾಗಿ ಅವರ ಸಾಂವಿಧಾನಿಕ ಹಕ್ಕನ್ನು ನೀಡಬೇಕು. ಒಳಮೀಸಲಾತಿ ಸಮೀಕ್ಷೆಯಲ್ಲಿ ಡ್ರಾವಿಡ, ಆದಿ ದ್ರಾವಿಡ ಸೇರಿದಂತೆ ಒಳ ಪಂಗಡಗಳಿಗೆ ಪ್ರತ್ಯೇಕ ಕಾಲಂ ಇದೆ. ರಾಜ್ಯದಾದ್ಯಂತ ಅಂಬೇಡ್ಕರ್ ಮತ್ತು ಬೌದ್ಧರ ಅನುಯಾಯಿಗಳನ್ನು ಸಂಘಟಿಸುವ ಜವಾಬ್ದಾರಿಯನ್ನು ಭಾರತೀಯ ಬೌದ್ಧ ಮಹಾಸಭಾ ಯುವ ಘಟಕ ಹೊಂದಿದೆ. ಡಾ.ಬಿ.ಆರ್. ಅಂಬೇಡ್ಕರ್ ಅವರ ಆಶಯಗಳನ್ನು ಪೂರೈಸಲು ಒಳ ಮೀಸಲಾತಿಯಲ್ಲಿ ಪೂರಕ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.


Share It

You cannot copy content of this page