ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ವ್ಯಕ್ತಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ ಅಡಿ ರಕ್ಷಣೆ ನೀಡಲಾಗದು ಎಂದು ಆಂಧ್ರಪ್ರದೇಶ ಹೈಕೋರ್ಟ್ ತೀರ್ಪು ನೀಡಿದೆ.
ತನಗೆ ಜಾತಿ ನಿಂದನೆ ಮಾಡಲಾಗಿದೆ ಎಂದು ಆರೋಪಿಸಿ ಚರ್ಚ್ ನ ಪಾದ್ರಿಯೊಬ್ಬರು ದಾಖಲಿಸಿದ್ದ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ರಾಮಿರೆಡ್ಡಿ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎನ್. ಹರಿನಾಥ್ ಅವರಿದ್ದ ಪೀಠ ಈ ತೀರ್ಪು ನೀಡಿದೆ.
ಹೈಕೋರ್ಟ್ ತನ್ನ ತೀರ್ಪಿನಲ್ಲಿ, ವ್ಯಕ್ತಿಯೊಬ್ಬ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ನಂತರ, ಆತ ಪರಿಶಿಷ್ಟ ಜಾತಿ ಸಮುದಾಯದ ಸದಸ್ಯನಾಗಿ ಉಳಿಯುವುದಿಲ್ಲ. ಪರಿಶಿಷ್ಟ ಜಾತಿಗೆ ಸೇರಿರುವ ಕುರಿತಂತೆ ಪ್ರಮಾಣಪತ್ರ ಹೊಂದಿದ್ದರೂ ಅಂತಹ ವ್ಯಕ್ತಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದರೆ, ಆತನಿಗೆ ಕಾಯ್ದೆ ಅಡಿ ರಕ್ಷಣೆ ಇರುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಅಲ್ಲದೇ, ಎಸ್ಸಿ-ಎಸ್ಟಿ ಸಮುದಾಯಗಳನ್ನು ತಾರತಮ್ಯ ಹಾಗೂ ದೌರ್ಜನ್ಯಗಳಿಂದ ರಕ್ಷಿಸಲು ಎಸ್ಸಿ-ಎಸ್ಸಿ ದೌರ್ಜನ್ಯ ತಡೆ ಕಾಯ್ದೆ ಜಾರಿಗೆ ತರಲಾಗಿದೆ. ಇಂತಹ ಸೌಲಭ್ಯವನ್ನು ಮತಾಂತರಗೊಂಡವರಿಗೆ ವಿಸ್ತರಿಸಲಾಗದು. ಮತಾಂತರಗೊಂಡಾಗ ಅವರ ಎಸ್ಸಿ/ಎಸ್ಟಿ ಸ್ಥಾನಮಾನವೂ ರದ್ದಾಗುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಹಿನ್ನೆಲೆ: ಗುಂಟೂರು ಜಿಲ್ಲೆಯ ಆನಂದ್ ಎಂಬುವರು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡು, ನಂತರದ ದಿನಗಳಲ್ಲಿ ಚರ್ಚ್ ನ ಪಾದ್ರಿಯಾಗಿಯೂ ನೇಮಕಗೊಂಡಿದ್ದರು. ಇತ್ತೀಚೆಗೆ ತನಗೆ ಮೇಲ್ಜಾತಿಯ ಅಕ್ಕಲ ರಾಮಿರೆಡ್ಡಿ ಮತ್ತಿತರರು ಜಾತಿ ನಿಂದನೆ ಮಾಡಿದ್ದಾರೆಂದು ಆರೋಪಿಸಿ ದೂರು ದಾಖಲಿಸಿದ್ದರು. ಈ ದೂರನ್ನು ರದ್ದುಪಡಿಸುವಂತೆ ಕೋರಿ ರಾಮಿರೆಡ್ಡಿ ಇತರರು ಹೈಕೋರ್ಟ್ ಮೊರೆ ಹೋಗಿದ್ದರು.
CRIMINAL PETITION No.7114 OF 2022