Education News

ಟಿಇಟಿ ಪರೀಕ್ಷೆಗೆ ಹೊರಬೀಳದ ಅಧಿಸೂಚನೆ; ನಿರಾಸೆಯಲ್ಲಿ ಲಕ್ಷಾಂತರ ಅಭ್ಯರ್ಥಿಗಳು

Share It

ಬೆಂಗಳೂರು: ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಮುಗಿದು ಒಂದು ವರ್ಷವಾದರೂ ಇನ್ನೂ ಅಧಿಸೂಚನೆ ಹೊರಬೀಳದಿದ್ದರಿಂದ ಪರೀಕ್ಷೆ ಬರೆಯಬೇಕೆಂಬ ಆಕ್ಷಾಂಕ್ಷೆ ಹೊಂದಿರುವ ಲಕ್ಷಾಂತರ ಅಭ್ಯರ್ಥಿಗಳಿಗೆ ನಿರಾಸೆಗೊಳಗಾಗಿದ್ದಾರೆ.

ಟಿಇಟಿ ಪರೀಕ್ಷೆಗೆ 2024ರಲ್ಲಿ ಏಪ್ರಿಲ್‌ನಲ್ಲೇ ಅಧಿಸೂಚನೆ ಹೊರಡಿಸಿದ್ದ ಶಿಕ್ಷಣ ಇಲಾಖೆ ಈ ವರ್ಷ ಇದುವರೆಗೂ ಅಧಿಕೃತ ಅಧಿಸೂಚನೆ ಹೊರಡಿಸದಿದ್ದರಿಂದ ಪರೀಕ್ಷೆ ಬರೆಯಲು ಸಿದ್ಧತೆ ಮಾಡಿಕೊಂಡಿರುವ ಅಭ್ಯರ್ಥಿಗಳು ಅಧಿಸೂಚನೆಗೆ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ. ನಿಯಮದ ಪ್ರಕಾರ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ಶಿಕ್ಷಣ ಇಲಾಖೆ ವರ್ಷದಲ್ಲಿ ಎರಡು ಬಾರಿ ನಡೆಸಬೇಕು. ಆದರೆ ಈ ಬಾರಿ ವರ್ಷ ಕಳೆದರೂ ಇದುವರೆಗೂ ಅಧಿಸೂಚನೆ ಹೊರಡಿಸಿಲ್ಲ.

ಟಿಇಟಿ ಪರೀಕ್ಷೆಯನ್ನು ಮೊದಲ ಬಾರಿಗೆ ಕಂಪ್ಯೂಟರ್ ಆಧಾರಿತವಾಗಿ ನಡೆಸಲು ಈಗಾಗಲೇ ಕೇಂದ್ರಿಕೃತ ಪ್ರವೇಶ ಕೋಶ ನಿರ್ಧರಿಸಿದ್ದು, ಶೀಘ್ರವೇ ಅಧಿಸೂಚನೆಯನ್ನು ಪ್ರಕಟಿಸಲಾಗುತ್ತದೆ ಎಂದು ಟಿಇಟಿ ಉಪನಿರ್ದೇಶಕ ಪ್ರಕಾಶ್ ಹೇಳಿದ್ದಾರೆ.

ಟಿಇಟಿ ಪರೀಕ್ಷೆಯನ್ನು ಬರೆಯಬೇಕಿರುವ ಲಕ್ಷಾಂತರ ವಿದ್ಯಾರ್ಥಿಗಳು ಅಧಿಸೂಚನೆಗಾಗಿ ಕಾಯುತ್ತಿದ್ದು, ಶಿಕ್ಷಣ ಇಲಾಖೆ ಈ ಕೂಡಲೇ ಟಿಇಟಿ ಪರೀಕ್ಷೆಯ ಅಧಿಸೂಚನೆಯನ್ನು ಬಿಡುಗಡೆಗೊಳಿಸಿ ಆದಷ್ಟು ಬೇಗ ಪರೀಕ್ಷೆ ನಡೆಸಬೇಕು ಎಂದು ನೃಪತುಂಗ ವಿಶ್ವವಿದ್ಯಾಲಯದ ಬಿಎಡ್ ವಿಭಾಗದ ಪ್ರೊ. ದೀಪಕ್ ಮನವಿ ಮಾಡಿದ್ದಾರೆ.

ಅಧಿಸೂಚನೆ ಹೊರಡಿಸದಿದ್ದರೆ ಟಿಇಟಿ ಪರೀಕ್ಷೆಗೆ ಯೋಜನೆ ರೂಪಿಸಲು ತೊಂದರೆಯಾಗುತ್ತಿದೆ. ಶಿಕ್ಷಕರ ಹುದ್ದೆಗಳಿಗೆ ನೇಮಕಾತಿ ಕರೆದಿರುವ ಸಂದರ್ಭದಲ್ಲಿ ಅರ್ಜಿ ಹಾಕಲು ತೊಂದರೆಯಾಗುತ್ತದೆ ಎಂದು ತೀರ್ಥಹಳ್ಳಿಯ ಟಿಇಟಿ ಆಕಾಂಕ್ಷಿ ಸುಶಾಂತ್ ಅಳಲು ತೋಡಿಕೊಂಡಿದ್ದಾರೆ.

ಟಿಇಟಿ ಪರೀಕ್ಷೆ ಏತಕ್ಕಾಗಿ?

ಪ್ರಾಥಮಿಕ ಮತ್ತು ಶಾಲಾ ಶಿಕ್ಷಕರಿಗೆ ಟಿಇಟಿ ಪರೀಕ್ಷೆ ಪೇಪರ್ -1 ಮತ್ತು ಪ್ರೌಢ ಶಾಲಾ ಶಿಕ್ಷಕರಿಗೆ ಪೇಪರ್ -2 ಪರೀಕ್ಷೆ ನಡೆಸಲಾಗುತ್ತದೆ. ಶಿಕ್ಷಕರಾಗಬಯಸುವವರು ಈ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ಕಡ್ಡಾಯವಾಗಿ ಉತ್ತೀರ್ಣರಾಗಿದ್ದರೆ ಮಾತ್ರ ಹುದ್ದೆಗೆ ಅರ್ಹತೆ ಗಿಟ್ಟಿಸುತ್ತಾರೆ. ಆದ್ದರಿಂದ ಡಿಎಡ್ ಹಾಗೂ ಬಿಎಡ್ ಮುಗಿಸಿದ ಸಾವಿರಾರು ವಿದ್ಯಾರ್ಥಿಗಳು ಟಿಇಟಿ ಅಧಿಸೂಚನೆಗಾಗಿ ಕಾಯುತ್ತಿದ್ದಾರೆ.

2024ರ ಏಪ್ರಿಲ್ ನಲ್ಲಿ ಹೊರಡಿಸಿದ್ದ ಅಧಿಸೂಚನೆ:

2024ರ ಏಪ್ರಿಲ್ 15ಕ್ಕೆ ಶಿಕ್ಷಕರ ಅರ್ಹತಾ ಪರೀಕ್ಷೆಯ ಅಧಿ ಸೂಚನೆಯನ್ನು ಕೇಂದ್ರಕೃತ ದಾಖಲಾತಿ ಘಟಕ (ಸಿ.ಎ ಸೆಲ್) ಹೊರಡಿಸಿತ್ತು. ಏ. 15 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿತ್ತು. ಒಂದು ತಿಂಗಳವರೆಗೆ ಅರ್ಜಿ ಹಾಕಲು ಅವಕಾಶ ನೀಡಿ ಮೇ. 30 ರಂದು ಟಿಇಟಿ ಪರೀಕ್ಷೆಯನ್ನು ನಡೆಸಿತ್ತು. ಆದರೆ, ಈ ವರ್ಷ ಇನ್ನೂ ಅಧಿಸೂಚನೆ ಹೊರಬೀಳದಿದ್ದರಿಂದ ಯಾವಾಗ ಅಧಿಸೂಚನೆ ಹೊರಬಿಳುತ್ತದೆ ಎಂದು ಕಾಯುವಂತಾಗಿದೆ.


Share It

You cannot copy content of this page