News

ಹಲಸೂರಿನಲ್ಲಿ ‘ಆಪರೇಷನ್ ಅಭ್ಯಾಸ್’ ಮಾಕ್ ಡ್ರಿಲ್

Share It

ಬೆಂಗಳೂರು: ಕೇಂದ್ರ ರಕ್ಷಣಾ ಇಲಾಖೆ ಹಾಗೂ ಗೃಹ ಇಲಾಖೆಯ ನಿರ್ದೇಶನದ ಮೇರೆಗೆ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯು ಹಮ್ಮಿಕೊಂಡಿದ್ದ ಅಣಕು ಕಾರ್ಯಾಚರಣೆ ಹಾಗೂ ನಾಗರಿಕರಿಗೆ ತುರ್ತು ಪರಿಸ್ಥಿತಿ ಎದುರಿಸುವ ಜಾಗೃತಿ ಕವಾಯತು ‘ಆಪರೇಷನ್ ಅಭ್ಯಾಸ್’ ನಗರದ ಹಲಸೂರಿನಲ್ಲಿ ಬುಧವಾರ ನಡೆಯಿತು.

ಕಾಲ್ಪನಿಕ ತುರ್ತು ಪರಿಸ್ಥಿತಿಯನ್ನು ಸೃಷ್ಟಿಸಿ ನಾಗರಿಕರ ರಕ್ಷಣೆ, ಅಗ್ನಿಶಮನ ಹಾಗೂ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡುವುದು ಸೇರಿದಂತೆ ವಿವಿಧ‌ ಪ್ರಕಾರದ ಅಣಕು ಪ್ರದರ್ಶನ ಮಾಡಲಾಯಿತು. ಸೈರನ್ ಮೊಳಗಿದ ಕೂಡಲೇ ನಾಗರಿಕರು ಕೈಗೊಳ್ಳಬೇಕಾದ ಎಚ್ಚರಿಕೆ ಹಾಗೂ ದುರ್ಘಟನೆಯಿಂದ ಕಟ್ಟಡಗಳಲ್ಲಿ ಸಿಲುಕಿರುವ ನಾಗರಿಕರನ್ನು ಸುಸಜ್ಜಿತವಾದ ಏರಿಯಲ್ ಲ್ಯಾಡರ್ ವಾಹನದ ಮೂಲಕ ರಕ್ಷಣೆ ಮಾಡುವುದನ್ನು ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಸಿಬ್ಬಂದಿಗಳು ಪ್ರದರ್ಶಿಸಿದರು.

ಪ್ರದರ್ಶನದ ಬಳಿಕ ಗೃಹ ಸಚಿವ ಪರಮೇಶ್ವರ್ ಮತನಾಡಿ, ದೇಶದ ರಕ್ಷಣೆಯ ಪರಿಸ್ಥಿತಿ ಯಾವ ರೀತಿ ಇದೆ ಎನ್ನುವುದು ಎಲ್ಲರಿಗೂ ತಿಳಿದಿದೆ. 1972ರಲ್ಲಿ ಇಂತಹದ್ದೇ ಸಂದರ್ಭ ಎದುರಾಗಿತ್ತು. ಆಗ ದೇಶದಲ್ಲಿ ಆಗಿರುವ ಘಟನೆಗಳನ್ನು ನೆನಪಿಸಿಕೊಳ್ಳಬಹುದು. ಅಂತದ್ದೆ ಸಂದರ್ಭ ನಮಗೆ ಈಗ ಬಂದಿದೆ. ಇತ್ತೀಚೆಗೆ ಕಾಶ್ಮೀರದಲ್ಲಿ ನಡೆದ ಘಟನೆ ಪ್ರತಿಯೊಬ್ಬ ಭಾರತೀಯನಿಗೆ ನೋವನ್ನುಂಟು ಮಾಡಿದೆ. 26 ಜನರ ಮೇಲೆ ಏಕಾಏಕಿಯಾಗಿ ದಾಳಿ ನಡೆಸಲಾಗಿದೆ. ಅಮಾಯಕ ಜನರು, ಮಕ್ಕಳ ಮೇಲೆ ಹತ್ಯೆ ಮಾಡಿರುವುದನ್ನು ಜ್ಞಾಪಿಸಿಕೊಂಡರೆ ನೋವಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ಗಡಿ ಕಾಯುವ ಸೈನಿಕರು ಇದೆಲ್ಲವನ್ನು ಸಹಿಸಿಕೊಂಡಿದ್ದಾರೆ. ರಕ್ಷಣಾ ಇಲಾಖೆಯು ನಿನ್ನೆ ರಾತ್ರಿ 1 ಗಂಟೆ ಸುಮಾರಿಗೆ ಪಾಕಿಸ್ತಾನದಲ್ಲಿನ ಉಗ್ರಗಾಮಿ ನೆಲೆಗಳ ಮೇಲೆ 9 ಕಡೆ ದಾಳಿ ನಡೆಸಿದೆ.‌ ಆದರೆ, ಎಲ್ಲೋ ಒಂದು ಕಡೆ ಯುದ್ಧದ ಛಾಯೆ ಇಡೀ ಭಾರತದಲ್ಲಿ ಆವರಿಸಿದೆ. ಭಾರತ ಪಾಕಿಸ್ಥಾನದ ಮೇಲೆ‌ ಯುದ್ಧಕ್ಕೆ ಹೋಗಬಹುದು ಅಥವಾ ಪಾಕಿಸ್ತಾನ ಭಾರತದ ಮೇಲೆ ಯುದ್ಧಕ್ಕೆ ಬರಬಹುದು ಎಂಬ ಛಾಯೆ ಮೂಡಿದೆ. ಇದಕ್ಕೆ ನಾವೆಲ್ಲ ತಯಾರಿ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.

ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದು ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೆ ಈಗಾಗಲೇ ಸೂಚನೆ ನೀಡಿದೆ. ನಾಗರಿಕರನ್ನು ಯಾವ ರೀತಿ ರಕ್ಷಣೆ ಮಾಡಬೇಕು, ಸಾರ್ವಜನಿಕರ ಜವಾಬ್ದಾರಿಗಳೇನು? ಈ ಗೊಂದಲದ ಸಂದರ್ಭದಲ್ಲಿ ಶಾಂತಿ ಪಾಲನೆ ಮಾಡುವುದು ಹೇಗೆ? ಗಾಯಾಳುಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವುದರಿಂದ ಹಿಡಿದು, ಪರಿಸ್ಥಿತಿಯನ್ನು ಯಾವ ರೀತಿ ನಿಭಾಯಿಸಬೇಕು ಎಂಬುದನ್ನು ‘ಆಪರೇಷನ್ ಅಭ್ಯಾಸ್’ ಮೂಲಕ ಸಿವಿಲ್ ಡಿಫೆನ್ಸ್‌ನಲ್ಲಿ ತೊಡಗಿಸಿಕೊಂಡಿರುವವರಿಗೆ ಅರಿವು ಮೂಡಿಸುವ ಅಗತ್ಯವಿದೆ ಎಂದರು.

ಜಲಾಶಯಗಳು, ಅಣುಸ್ಥಾವರ, ಕೈಗಾರಿಕಾ ಪ್ರದೇಶ ಹಾಗೂ ಹೆಚ್ಚು ಜನ ಜೀವನ ಮಾಡುತ್ತಿರುವುದನ್ನು ಆಧರಿಸಿ ಸ್ಥಳಗಳನ್ನು ಗುರುತಿಸಲಾಗಿದೆ. ರಾಯಚೂರಿನಲ್ಲಿ ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ವಿದ್ಯುತ್ ಉತ್ಪಾದನಾ‌ ಘಟಕ, ಕಾರವಾರದಲ್ಲಿ ಅಣುಸ್ಥಾವರ ಮತ್ತು ಇಡೀ ದೇಶದ ಆರ್ಥಿಕ ವ್ಯವಸ್ಥೆಗೆ ಹೆಚ್ಚು ತೆರಿಗೆ ನೀಡುವ ಶಕ್ತಿ ಬೆಂಗಳೂರಿಗೆ ಇದೆ. ಇಂತಹ ಪ್ರಮುಖ ಸ್ಥಳಗಳನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದನ್ನು ಆಧರಿಸಿ ಪ್ರದೇಶಗಳನ್ನು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು.

ರಕ್ಷಣೆ ಕಾರ್ಯಚರಣೆಯ ಸಂದರ್ಭದಲ್ಲಿ ಪ್ರತಿಯೊಂದು ನಿಮಿಷವು ಬಹಳ ಮುಖ್ಯವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಚುರುಕಾಗಿ ಮಾಡಬೇಕು. ಯುದ್ಧಗಳ ಸಂದರ್ಭದಲ್ಲಿ ಯಾವ ಊರಲ್ಲಿ ಏನಾಗುತ್ತದೆ ಎಂಬುದು ಗೊತ್ತಾಗುವುದಿಲ್ಲ. ಅಂತಹ ಸಂದರ್ಭ ಬರಬಾರದು. ಶಾಲಾ-ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳಿಗೂ ಈ ಮಾಹಿತಿ ನೀಡಬೇಕಾಗುತ್ತದೆ. ಅಗ್ನಿಶಾಮಕ ಮತ್ತು ತುರ್ತುಸೇವೆ ಸಿಬ್ಬಂದಿಗಳು ಅಲ್ಲಿಗೆ ಭೇಟಿ ನೀಡಿ ಅಗತ್ಯ ಜಾಗೃತಿಯನ್ನು ಮೂಡಿಸಬೇಕು ಎಂದು ಸೂಚಿಸಿದರು.

ಈ ಸಂದರ್ಭದಲ್ಲಿ ಸಂಸದ ಡಾ. ಕೆ.ಸುಧಾಕರ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್, ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಇಲಾಖೆಯ ಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್, ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್, ಗೃಹ ಇಲಾಖೆಯ ಕಾರ್ಯದರ್ಶಿ ಎಸ್.ರವಿ, ಡಿಐಜಿ ರವಿ.ಡಿ.ಚನ್ನಣ್ಣನವರ್ ಸೇರಿದಂತೆ ಮುಂತಾದ ಅಧಿಕಾರಿಗಳು ಇದ್ದರು.


Share It

You cannot copy content of this page