ಬೆಂಗಳೂರು: ಭಾರತ- ಪಾಕ್ ಉದ್ವಿಗ್ನತೆಯ ಸಂದರ್ಭದಲ್ಲಿ ದೇಶಾದ್ಯಂತ ಘೋಷಿಸಲಾಗಿರುವ ಭದ್ರತಾ ಎಚ್ಚರಿಕೆಯ ಹಿನ್ನೆಲೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣಿಸುವವರು ಇನ್ಮುಂದೆ ವಿಮಾನ ಹೊರಡುವ ಕನಿಷ್ಠ ಮೂರು ಗಂಟೆ ಮುಂಚೆ ನಿಲ್ದಾಣದಲ್ಲಿ ಹಾಜರಾಗಬೇಕು ಎಂದು ಕೆಇಎ ಮನವಿ ಮಾಡಿದೆ.
ದೇಶದೆಲ್ಲೆಡೆ ಭದ್ರತೆ ಹೆಚ್ಚಿರುವ ಹಿನ್ನೆಲೆಯಲ್ಲಿ ರಾಷ್ಟ್ರವ್ಯಾಪಿ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್ ಹೆಚ್ಚಿಸಲಾಗಿದೆ. ಪ್ರಯಾಣಕ್ಕೂ ಮುನ್ನ ಸುಗಮ ಚೆಕ್ ಇನ್, ಭದ್ರತೆ ಮತ್ತು ಸರಾಗ ಬೋರ್ಡಿಂಗ್ ಅನುಭವಕ್ಕಾಗಿ ಕನಿಷ್ಠ ಮೂರು ಗಂಟೆ ಮುನ್ನ ನಿಲ್ದಾಣ ತಲುಪುವಂತೆ ಪ್ರಯಾಣಿಕರಿಗೆ ಸಲಹೆ ನೀಡಿದೆ.
ಇದೇ ವೇಳೆ ಕೆಐಎ, ಪ್ರಯಾಣಿಕರು ತಮ್ಮ ಪ್ರಯಾಣಕ್ಕೆ ಮುನ್ನ ವಿಮಾನ ಸೇವೆಗಳ ಅಪ್ಡೇಟ್ ಮಾಹಿತಿಯನ್ನು ಕೂಡ ಪರೀಕ್ಷಿಸುವಂತೆ ಕೋರಿದೆ. ಈ ಸಮಯದಲ್ಲಿ ಪರಿಸ್ಥಿತಿ ಅರ್ಥೈಸಿಕೊಂಡು ಸಹಕಾರ ನೀಡುವಂತೆ ತಿಳಿಸಿದೆ.
ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ನಾಗರಿಕ ವಿಮಾನ ಭದ್ರತಾ ಬ್ಯೂರೋ (ಬಿಸಿಎಎಸ್) ಎಲ್ಲಾ ವಿಮಾನಗಳಿಗೆ ದ್ವಿತೀಯ ಲ್ಯಾಡರ್ ಪಾಯಿಂಟ್ ತಪಾಸಣೆಯನ್ನು ಕಡ್ಡಾಯಗೊಳಿಸಿದೆ. ವಿಮಾನ ನಿಲ್ದಾಣಗಳ ಟರ್ಮಿನಲ್‌ಗಳಿಗೆ ಸಂದರ್ಶಕರನ್ನು, ಪ್ರಯಾಣಿಕರನ್ನು ಕಳುಹಿಸಿಕೊಡಲು ಬರುವವರಿಗೆ ನಿಷೇಧಿಸಿದ್ದು, ಇಡೀ ವಿಮಾನ ನಿಲ್ದಾಣದ ಸುತ್ತಮುತ್ತ ಕಟ್ಟೆಚ್ಚರವಹಿಸುವಂತೆ ಸೂಚಿಸಿದೆ.