ಬೆಂಗಳೂರು: ಹೈಕೋರ್ಟ್ ಮಾದರಿಯಲ್ಲೇ ಜಿಲ್ಲಾ ನ್ಯಾಯಾಲಯಗಳಲ್ಲೂ ಎ4 ವೈಟ್ ಶೀಟ್ ಗಳಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು ಮತ್ತು ಇಂತಹ ಅರ್ಜಿ, ಮನವಿಗಳನ್ನು ನ್ಯಾಯಾಲಯಗಳ ಸಿಬ್ಬಂದಿ ಸ್ವೀಕರಿಸಬೇಕು ಎಂದು ಹೈಕೋರ್ಟ್ ರಾಜ್ಯದ ಎಲ್ಲಾ ಜಿಲ್ಲಾ ನ್ಯಾಯಾಲಯಗಳಿಗೆ ನಿರ್ದೇಶಿಸಿದೆ.
ಈ ಕುರಿತಂತೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಆದೇಶಾನುಸಾರ ರಿಜಿಸ್ಟ್ರಾರ್ ಜನರಲ್ ಕೆ,ಎಸ್. ಭರತ್ ಕುಮಾರ್ ಸುತ್ತೋಲೆ ಹೊರಡಿಸಿದ್ದಾರೆ. ಅದರಂತೆ ಇನ್ನು ಮುಂದೆ ಜಿಲ್ಲಾ ನ್ಯಾಯಾಲಯಗಳಲ್ಲೂ ವಕೀಲರು/ಕಕ್ಷೀದಾರರು ಹೈಕೋರ್ಟ್ ಮಾದರಿಯಲ್ಲೇ ಎ4 ವೈಟ್ ಶೀಟ್ ಗಳಲ್ಲಿ ಅರ್ಜಿಗಳನ್ನು, ಮನವಿಗಳನ್ನು ಸಲ್ಲಿಸಬಹುದಾಗಿದೆ.
ಜಿಲ್ಲಾ ನ್ಯಾಯಾಲಯಗಳಲ್ಲಿ A4 ಶೀಟ್ ಗಳಲ್ಲಿ ಅರ್ಜಿಗಳನ್ನು ಸ್ವೀಕರಿಸದಿರುವ ಬಗ್ಗೆ ವಕೀಲರು ಹೈಕೋರ್ಟ್ ಗಮನಕ್ಕೆ ತಂದಿದ್ದರು. ಇದನ್ನು ಪರಿಗಣಿಸಿದ ಹೈಕೋರ್ಟ್, ಸಿವಿಲ್ ಮತ್ತು ಕ್ರಿಮಿನಲ್ ಅಭ್ಯಾಸ ನಿಯಮಗಳಿಗೆ ಮಾರ್ಪಾಡುಗಳನ್ನು ಸೂಚಿಸಿದ್ದು, ಜಿಲ್ಲಾ ನ್ಯಾಯಾಲಯಗಳು ಇನ್ನು ಮುಂದೆ ಯಾವುದೇ ಪತ್ರಿಕೆಗಳು/ದಾಖಲೆಗಳು ಇತ್ಯಾದಿಗಳನ್ನು ಸ್ವೀಕರಿಸುವಾಗ ಕರ್ನಾಟಕ ಸಿವಿಲ್ ಅಭ್ಯಾಸ ನಿಯಮಗಳು, 1967 ರ ಅಸ್ತಿತ್ವದಲ್ಲಿರುವ ನಿಯಮ 7(1) ಅನ್ನು ಅನುಸರಿಸುವಂತೆ ನಿರ್ದೇಶಿಸಿದೆ. ಅದರಂತೆ ವಕೀಲರು ಎ4 ಹಾಳೆಗಳಲ್ಲಿ ತಮ್ಮ ವಾದ, ಮನವಿ, ಜ್ಞಾಪನ ಇತ್ಯಾದಿಗಳನ್ನು ಸಲ್ಲಿಸಬಹುದು.
ಈ ನಿಯಮವನ್ನು, ಜಿಲ್ಲಾ ನ್ಯಾಯಾಂಗದ ಎಲ್ಲಾ ಅಧಿಕಾರಿಗಳು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಹೈಕೋರ್ಟ್ ನಿರ್ದೇಶಿಸಿದೆ
ಕಳೆದ ಎರಡು ವರ್ಷಗಳ ಹಿಂದೆ ಹೈಕೋರ್ಟ್ ತನ್ನ ನಿಯಮಗಳನ್ನು ತಿದ್ದುಪಡಿ ಮಾಡಿ ಹೈಕೋರ್ಟ್ ಗೆ ಲೀಗಲ್ ಗ್ರೀನ್ ಶೀಟ್ ಗಳಲ್ಲಿ ಫೈಲಿಂಗ್ ಮಾಡುವುದರಿಂದ ವಿನಾಯ್ತಿ ನೀಡಿತ್ತು. ಮೇಲ್ಮನವಿ(appeal), ಮನವಿ(petition), ಅಫಿಡವಿಟ್(affidavit, ಮಧ್ಯಂತರ ಅರ್ಜಿ(interlocutory application) ಅಥವಾ ಇತರೆ ಮೆಮೊರಾಂಡಮ್ ಅಥವಾ ದಾಖಲೆಯನ್ನು ಎ4 ಸೈಜ್ ಪೇಪರ್ ಹಾಳೆಯ ಒಂದು ಬದಿಯಲ್ಲಿ ಮಾತ್ರ ಮುದ್ರಿಸುವಂತೆ ಸೂಚಿಸಲಾಗಿತ್ತು. A-4 ಸೈಜ್ ನ (30.5 cm ಉದ್ದ ಮತ್ತು 21.5 cm ಅಗಲ) ದೃಢವಾದ ಮತ್ತು ಬಾಳಿಕೆ ಬರುವ ಬಿಳಿ ಹಾಳೆಯು ಕನಿಷ್ಠ 75 gsm ತೂಕ ಇರಬೇಕು. ಪೇಪರ್ ನ ಮೇಲೆ ಶೀರ್ಷಿಕೆ ಫಾಂಟ್ ಗಾತ್ರ-14″ ದಪ್ಪ ಇರಬೇಕು. ಉಳಿದ ಪಠ್ಯದ ಫಾಂಟ್ ಗಾತ್ರ 12″ ಇರಬೇಕು. ಎಡ ಅಂಚಿನಲ್ಲಿ 1.75 ಇಂಚು, ಬಲ ಅಂಚಿನಲ್ಲಿ 1 ಇಂಚು, ಮೇಲಿನ ಅಂಚು 1.5 ಇಂಚು ಮತ್ತು ಕೆಳಗಿನ ಅಂಚು 1.5 ಇಂಚು ಖಾಲಿ ಇರಬೇಕು. ಟೈಪಿಂಗ್ ಸಾಲುಗಳ ನಡುವೆ 1.5 ಸಾಲಿನ ಅಂತರ ಇರಬೇಕು ಎಂದು ಸ್ಪಷ್ಟಪಡಿಸಲಾಗಿತ್ತು. ಇದೇ ರೀತಿಯ ನಿಯಮವನ್ನು ಇದೀಗ ಜಿಲ್ಲಾ ನ್ಯಾಯಾಲಯಗಳಿಗೂ ವಿಸ್ತರಿಸಲಾಗಿದೆ.