News

ಅಂತರ್ಜಲ ಬಳಕೆಗೆ ‘ಆಕ್ಷೇಪಣಾ ಪ್ರಮಾಣಪತ್ರ’ ಕಡ್ಡಾಯ

Share It

ಬೆಂಗಳೂರು: ರಾಜ್ಯದಲ್ಲಿ ಅಂತರ್ಜಲ ಮಟ್ಟ ಪರಿಶೀಲನೆ ಮತ್ತು ಸಮತೋಲನವನ್ನು ಜಾರಿಗೆ ತರಲು, ಮತ್ತು ನಿರ್ಮಾಣ ಚಟುವಟಿಕೆಗಳಿಗೆ ಅಂತರ್ಜಲವನ್ನು ಬಳಸಲು `ಆಕ್ಷೇಪಣಾ ಪ್ರಮಾಣಪತ್ರ’ ಅಥವಾ `ಆಕ್ಯುಪೆನ್ಸಿ ಪ್ರಮಾಣಪತ್ರ’ ಕಡ್ಡಾಯವಾಗಿದೆ.

ಅಂತರ್ಜಲ ನಿರ್ದೇಶನಾಲಯ ಮತ್ತು ಕರ್ನಾಟಕ ಅಂತರ್ಜಲ ಪ್ರಾಧಿಕಾರ ಈ ಬಗ್ಗೆ ರಾಜ್ಯದ ಎಲ್ಲಾ ಇಲಾಖೆಗಳಿಗೆ ಮತ್ತೊಮ್ಮೆ ಸೂಚನಾ ಪತ್ರ ಕಳುಹಿಸಿದ್ದು, ಅಂತರ್ಜಲವನ್ನು ಬಳಸುವ ಕಟ್ಟಡಗಳು ಮತ್ತು ಇತರ ಸಂಸ್ಥೆಗಳ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಪ್ರಾಧಿಕಾರದ ಗಮನಕ್ಕೆ ಬಂದಿದ್ದು ಇದರಲ್ಲಿ ಅನೇಕರು ಅನುಮೋದನೆ ಪಡೆಯುತ್ತಿಲ್ಲ. ದತ್ತಾಂಶದ ಪ್ರಕಾರ 2019ರಿಂದ ಇಲ್ಲಿಯವರೆಗೆ, ಬೆಂಗಳೂರಿನಲ್ಲಿ 205 ಕೈಗಾರಿಕೆಗಳು, ವಸತಿ ಮತ್ತು ವಾಣಿಜ್ಯ ಸಂಸ್ಥೆಗಳಿಗೆ ಮಾತ್ರ ಅನುಮತಿ ನೀಡಲಾಗಿದೆ ಎಂದಿದೆ.

ಅಂತರ್ಜಲ ಬಳಕೆಗೆ ಪ್ರಾಧಿಕಾರದ ಅನುಮತಿಯನ್ನು ಪಡೆಯದ ಸಂಸ್ಥೆಗಳಿಗೆ ಸುಮಾರು 400 ನೋಟಿಸ್‌ಗಳನ್ನು ನೀಡಲಾಗಿದೆ. 2024-25ರ ಹಣಕಾಸು ವರ್ಷದಲ್ಲಿ 942 ಬೋರ್‌ವೆಲ್‌ಗಳಿಗೆ ಅನುಮತಿ ನೀಡಲಾಗಿದೆ. ನಿಯಮಗಳ ಬಗ್ಗೆ ತಿಳಿದಿಲ್ಲದ ಕಾರಣ ಜನರು ಪ್ರಾಧಿಕಾರದಿಂದ ಅನುಮೋದನೆ ಪಡೆಯುತ್ತಿಲ್ಲ ಎಂದು ಬೆಂಗಳೂರು ನಗರ, ಅಂತರ್ಜಲ ನಿರ್ದೇಶನಾಲಯದ ಉಪ ನಿರ್ದೇಶಕಿ ಅಂಬಿಕಾ ತಿಳಿಸಿದ್ದಾರೆ.

ಮನೆ ಮಾಲೀಕರು ಬೋರ್‌ವೆಲ್‌ಗಳನ್ನು ಕೊರೆಯಲು ಅನುಮತಿಗಾಗಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯನ್ನು (ಬಿಡಬ್ಲ್ಯೂಎಸ್‌ಎಸ್‌ಬಿ) ಸಂಪರ್ಕಿಸಬೇಕು, ಆದರೆ ದೊಡ್ಡ ಸಂಸ್ಥೆಗಳು ಪ್ರಾಧಿಕಾರದಿಂದ ಅನುಮೋದನೆ ಪಡೆಯಬೇಕಾಗುತ್ತದೆ ಎಂದು ಹೇಳಿದ್ದಾರೆ.


Share It

You cannot copy content of this page