ನವದೆಹಲಿ/ಬೆಂಗಳೂರು: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್‌ಇ) 2025ನೇ ಸಾಲಿನ 10ನೇ ತರಗತಿಯ ಫಲಿತಾಂಶದ ಜೊತೆಗೆ 12ನೇ ತರಗತಿ ಫಲಿತಾಂಶವನ್ನೂ ಪ್ರಕಟಿಸಿದ್ದು, ಶೇ. 88.39 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಪರೀಕ್ಷೆಯಲ್ಲಿ ಕೂಡ ವಿದ್ಯಾರ್ಥಿನಿಯರೆ ಮೇಲುಗೈ ಸಾಧಿಸಿದ್ದಾರೆ.
ಕಳೆದ ಬಾರಿಗಿಂತ ಶೇಕಡಾ 0.41 ರಷ್ಟು ಫಲಿತಾಂಶ ಹೆಚ್ಚಳವಾಗಿದೆ. ಈ ಬಾರಿ ಶೇಕಡಾ 99.60 ರಷ್ಟು ಫಲಿತಾಂಶ ಪಡೆಯುವ ಮೂಲಕ ವಿಜಯವಾಡ ಇಡೀ ದೇಶದಲ್ಲೇ ನಂ.1 ಸ್ಥಾನ ಪಡೆದಿದೆ. ತಿರುವನಂತಪುರ ಶೇ. 99.32, ಚೆನ್ನೈ ಶೇ. 97.39 ರಷ್ಟು ಫಲಿತಾಂಶ ದಾಖಲಿಸಿ ಕ್ರಮವಾಗಿ ದ್ವಿತೀಯ, ತೃತೀಯ ಸ್ಥಾನ ಪಡೆದಿದೆ, ದೇಶದ ಪ್ರಮುಖ ನಗರಗಳಲ್ಲಿ ಬೆಂಗಳೂರು ಶೇ ,95.95ರಷ್ಟು ಫಲಿತಾಂಶ ಪಡೆಯುವ ಮೂಲಕ 4ನೇ ಸ್ಥಾನ ಪಡೆದಿದೆ. ಶೇ.79.53ರಷ್ಟು ಫಲಿತಾಂಶ ಪಡೆದ ಪ್ರಯಾಗ್‌ರಾಜ್ ಕೊನೆಯ ಸ್ಥಾನದಲ್ಲಿದೆ.
ಜವಾಹರ್ ನವೋದಯ ವಿದ್ಯಾಲಯಗಳು 99.29% ರಷ್ಟು ಫಲಿತಾಂಶವನ್ನು ದಾಖಲಿಸಿ ಅಗ್ರಸ್ಥಾನ ಪಡೆದಿದ್ದು, ಕೇಂದ್ರೀಯ ವಿದ್ಯಾಲಯಗಳು 99.05% ರಷ್ಟು ಫಲಿತಾಂಶ ದಾಖಲಿಸಿವೆ. ಖಾಸಗಿ ಶಾಲೆಗಳು ಕೂಡ ಉತ್ತಮ ಪ್ರದರ್ಶನ ನೀಡಿ 98.96% ರಷ್ಟು ಉತ್ತೀರ್ಣತೆಯನ್ನು ದಾಖಲಿಸಿವೆ. ಸರ್ಕಾರಿ ಅನುದಾನಿತ ಶಾಲೆಗಳಲ್ಲಿ 91.57 ರಷ್ಟು, ಸರ್ಕಾರಿ ಶಾಲೆಗಳಲ್ಲಿ ಶೇ.90.48 ರಷ್ಟು ಮತ್ತು ಇತರೆ ಶಾಲೆಗಳಲ್ಲಿ 87.94 ರಷ್ಟು ಫಲಿತಾಂಶ ಬಂದಿದೆ. ಇನ್ನು 1,11,544 ವಿದ್ಯಾರ್ಥಿಗಳು 90% ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದು, 24,867 ವಿದ್ಯಾರ್ಥಿಗಳು ಶೇ.95 ಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ.
ಫೆಬ್ರವರಿ ಇಂದ ಏಪ್ರಿಲ್ ವರೆಗೆ ನಡೆದ ಪರೀಕ್ಷೆ:
ದೇಶಾದ್ಯಂತ ಕಳೆದ ಫೆ. 15ರಿಂದ ಏ. 4 ರವರೆಗೆ ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆ ನಡೆಸಲಾಗಿತ್ತು. ಈ ವರ್ಷ ಸುಮಾರು 304 ಶಾಲೆಗಳು ಹೆಸರು ನೋಂದಾಯಿಸಿದ್ದವು, 180 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು.