News

ಗ್ರೇಟರ್ ಬೆಂಗಳೂರು ಹೆಚ್ಚು ಮಳೆಯಾದರೆ ಮುಳುಗುತ್ತದೆ, ಕಡಿಮೆಯಾದರೆ ತೇಲುತ್ತದೆ: ಹೆಚ್.ಡಿ.ಕೆ

Share It

ನವದೆಹಲಿ: ಕರ್ನಾಟಕದ ರಾಜಧಾನಿ ಬೆಂಗಳೂರು ನಗರ ಮಳೆ ಅನಾಹುತಕ್ಕೆ ಸಿಕ್ಕಿ ನಲುಗುತ್ತಿರುವ ಬಗ್ಗೆ ರಾಜ್ಯ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸಂಗ್ರಹ ಆಗುತ್ತಿರುವ ಆದಾಯ, ತೆರಿಗೆ ಹಣ ಎಲ್ಲಿ ಹೋಗುತ್ತಿದೆ ಎಂದು ಪ್ರಶ್ನಿಸಿದ್ದಾರೆ. ಗ್ರೇಟರ್ ಬೆಂಗಳೂರು ಹೆಚ್ಚು ಮಳೆಯಾದರೆ ಮುಳುಗುತ್ತದೆ, ಕಡಿಮೆ ಸುರಿದರೆ ತೇಲುತ್ತದೆ ಎಂದು ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.

ಭಾನುವಾರ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ರಸ್ತೆಗಳಲ್ಲಿಯೇ ಕೆರೆ, ಚರಂಡಿ. ಇನ್ನು ಗುಂಡಿಗೆ ಹಿಡಿ ಮಣ್ಣಾಕುವುದಕ್ಕೂ ಬಿಡಿಗಾಸಿಲ್ಲ. ಸುರಂಗಕ್ಕೆ ಮಾತ್ರ ಸಾವಿರಾರು ಕೋಟಿ ಟೆಂಡರು. ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆ ಹೂವು ಎನ್ನುವಂತಾಗಿದೆ. ವಾರಕ್ಕೊಮ್ಮೆ ತೆರಿಗೆ ಬರೆ, ದರ ಏರಿಕೆ ಜನರೆಂದರೆ ಜೀವರಹಿತ ಕಲ್ಲುಬಂಡೆಗಳೇ? ಮನಸೋಇಚ್ಛೆ ಒಡೆದು ಬಡಿದು ನುಂಗಲು? ನಾಡು ಎಂದರೆ ಕಲ್ಲು ಬಂಡೆಗಳಲ್ಲ, ನಾಡು ಎಂದರೆ ಮನುಷ್ಯರು ಎಂದು ಹರಿಹಾಯ್ದಿದ್ದಾರೆ.

ಕೆರೆಯ ನೀರನು ಕೆರೆಗೆ ಚೆಲ್ಲುತ್ತಿಲ್ಲವೇಕೆ? ಕೆರೆ ನೀರಿಗೆ ಕಮೀಷನ್ ಕೋಡಿ ಬಿದ್ದಿದೆಯೇ? ತೆರಿಗೆ ಥೈಲಿ, ಬೆಲೆ ಸುಲಿಗೆ ಹಣವೆಲ್ಲಿ? ಜಾಹೀರಾತುಗಳಲ್ಲಿ ಬಣ್ಣಬಣ್ಣವಾಗಿ ಕಾಣುವ ಬೆಂಗಳೂರು, ನೈಜವಾಗಿ ನಿಟ್ಟುಸಿರು ಬಿಡುತ್ತಿದೆ. ಏಕೆ? ಬರುತ್ತಿರುವ ಆದಾಯ ಎಲ್ಲಿ ಹೋಗುತ್ತಿದೆ? ನಗರ ಜನರ ಬೆವರಿನ ಹಣ ಏನೇನಾಗುತ್ತಿದೆ? ಕಲೆಕ್ಷನ್ ಎಷ್ಟು? ವೆಚ್ಚ ಎಷ್ಟು? ಸ್ವಾಹಾ ಎಷ್ಟು? ಎಂದು ಪ್ರಶ್ನಿಸಿದ್ದಾರೆ.

ಗುಂಡಿ ಮುಚ್ಚಲು ಗತಿ ಇಲ್ಲ. ಚರಂಡಿ ಕಸ ಎತ್ತಲು ದಿಕ್ಕಿಲ್ಲ. ನಿತ್ಯವೂ ಗುದ್ದಲಿಪೂಜೆ, ಶಂಕುಸ್ಥಾಪನೆಯೇ.ಹೊಸ ಶೀಶೆ, ಹಳೇ ಮದ್ಯ, ಹಳೇ ಕಾಮಗಾರಿ, ಹೊಸ ಹೊಸ ಬಿಲ್ಲು ಅಷ್ಟೇ. ಇದು ಗ್ರೇಟರ್ ಬೆಂಗಳೂರು ಅಲ್ಲ, ಲೂಟರ್ ಗಳ ಬೆಂಗಳೂರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


Share It

You cannot copy content of this page