ಬೆಂಗಳೂರು: ಸರಿಯಾಗಿ ನೋಂದಣಿ ಸಂಖ್ಯೆಯನ್ನು ನಮೂದಿಸದ ಕಾರಣದಿಂದ ಸಿಇಟಿ-2025ರ ಫಲಿತಾಂಶ ಪ್ರಕಟವಾಗದೇ ಇರುವ ಅಭ್ಯರ್ಥಿಗಳಿಗೆ ತಮ್ಮ ಅಂಕಗಳನ್ನು ದಾಖಲಿಸಲು ಅವಕಾಶ ನೀಡುವ ಸಲುವಾಗಿ ಮೇ 26ರಿಂದ ಆನ್ ಲೈನ್ ಲಿಂಕ್ ತೆರೆಯಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.
ಸಿಇಟಿ-2025ರ ಫಲಿತಾಂಶವನ್ನು ಕೆಇಎ ಶನಿವಾರ ಪ್ರಕಟಿಸಿದ್ದು, ಕೆಲವು ಅಭ್ಯರ್ಥಿಗಳು ಹಿಂದಿನ ವರ್ಷದಲ್ಲಿ ಸೆಕೆಂಡ್ ಪಿಯು/12ನೇ ತರಗತಿ ಪರೀಕ್ಷೆಗಳಲ್ಲಿ ತಾವು ತೇರ್ಗಡೆಯಾಗಿದ್ದರೂ ಫಲಿತಾಂಶ ಪ್ರಕಟವಾಗಿಲ್ಲ ಎಂದು ಮನವಿಗಳನ್ನು ಸಲ್ಲಿಸುತ್ತಿರುವ ಹಿನ್ನೆಲೆಯಲ್ಲಿ ಅವರು ಸ್ಪಷ್ಟನೆ ನೀಡಿದ್ದಾರೆ.
ಫಲಿತಾಂಶವನ್ನು ಪ್ರಕಟಿಸುವ ಮೊದಲು 2ನೇ ಪಿಯು/12ನೇ ತರಗತಿ ಅಂಕಗಳನ್ನು ಆಯಾ ಮಂಡಳಿಗಳಿಂದಲೇ ಪಡೆಯಲಾಗುವುದು ಎಂದು ಸೂಚಿಸಲಾಗಿತ್ತು ಮತ್ತು ಅಭ್ಯರ್ಥಿಗಳು ಸರಿಯಾದ ನೋಂದಣಿ ಸಂಖ್ಯೆಯನ್ನು ನಮೂದಿಸುವುದು ಕಡ್ಡಾಯ ಎಂದು ಸೂಚಿಸಲಾಗಿತ್ತು. ಆದರೂ ಕೆಲವು ಅಭ್ಯರ್ಥಿಗಳು ನೋಂದಣಿ ಸಂಖ್ಯೆಯನ್ನು ಸರಿಯಾಗಿ ನಮೂದಿಸಿರಲಿಲ್ಲ. ಹೀಗಾಗಿ, ಅಂತಹ ಅಭ್ಯರ್ಥಿಗಳ ಫಲಿತಾಂಶ ಪ್ರಕಟಿಸಲು ಸಾಧ್ಯವಾಗಿಲ್ಲ ಎಂದು ಪ್ರಸನ್ನ ವಿವರಿಸಿದ್ದಾರೆ.
ಮೇ 26ರಿಂದ ತೆರೆಯಲಾಗುವ ಲಿಂಕ್ ನಲ್ಲಿ ಅಭ್ಯರ್ಥಿಗಳು 2ನೇ ಪಿಯು /12ನೇ ತರಗತಿ ಅಂಕಗಳನ್ನು ನೋಂದಣಿ ಸಂಖ್ಯೆಯೊಂದಿಗೆ ದಾಖಲಿಸಬೇಕು ಮತ್ತು ಅಂಕಪಟ್ಟಿಯನ್ನು ಅಪ್ ಲೋಡ್ ಮಾಡಬೇಕು. ಅಭ್ಯರ್ಥಿಗಳು ದಾಖಲಿಸುವ ಅಂಕಗಳನ್ನು ಆಯಾ ಪರೀಕ್ಷಾ ಮಂಡಳಿಯಿಂದ ಪರಿಶೀಲಿಸಿ ಧೃಡೀಕರಿಸಿದ ನಂತರವೇ ಸ್ಪಾಟ್ ರಾಂಕ್ ಅನ್ನು ಮೇ 29ರಿಂದ ನೀಡಲು ಕ್ರಮವಹಿಸಲಾಗುವುದು. ಸ್ಪಾಟ್ ರಾಂಕ್ ಪಡೆಯಲು ಅಭ್ಯರ್ಥಿಗಳು ಪ್ರಾಧಿಕಾರಕ್ಕೆ ಬರುವ ಅವಶ್ಯಕತೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.