Agriculture News

ಯಶಸ್ಸು ಕಂಡ ಕೃಷಿ ವಿಶ್ವವಿದ್ಯಾಲಯದ ರೈತ ಸಂತೆ

Share It

ಬೆಂಗಳೂರು: ಹೆಬ್ಬಾಳದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಲಾಗಿದ್ದ ರೈತ ಸಂತೆಗೆ ಉತ್ತಮ ಸ್ಪಂದನೆ ದೊರಕಿದ್ದು, ಬೆಳಗ್ಗೆಯಿಂದಲೆ ಜನರು ಆಗಮಿಸಿ ಖರೀದಿಗಾಗಿ ಮುಗಿಬಿದ್ದಿದ್ದದ್ದು ವಿಶೇಷವಾಗಿತ್ತು.

ಬೆಂಗಳೂರು ಕೃಷಿ ವಿವಿ ಆವರಣದಲಿ ಶನಿವಾರ ಆಯೋಜಿಸಿದ್ದ ರೈತ ಸಂತೆಯಲ್ಲಿ ವಿವಿಧ ಬಗೆಯ ಹಲಸು ಹಾಗೂ ಮಾವಿನ ಹಣ್ಣುಗಳು ಗ್ರಾಹಕರ ಗಮನ ಸೆಳೆದವು. ಮತ್ತೊಂದೆಡೆ ಪಶುಸಂಗೋಪನೆ, ಕೇಕ್ ಪ್ರದರ್ಶನ, ಹಲವು ಬಗೆಯ ಅಕ್ಕಿ, ರಾಸಾಯನಿಕ ಮುಕ್ತ ಬೆಲ್ಲ ಹಾಗೂ ನಾನಾ ಬಗೆಯ ತರಕಾರಿಗಳು ಹಾಗೂ ತಿಂಡಿ ತಿನಿಸುಗಳನ್ನು ಜನರು ಖುಷಿಯಿಂದ ಖರೀದಿಸಿದ್ದು ಸಂತೆಗೆ ಮತ್ತಷ್ಟು ಮೆರಗು ದೊರಕಿತ್ತು.

ಬೆಳಗ್ಗೆ 7 ಗಂಟೆಗೇ ಸಂತೆ ಆರಂಭವಾಗಿದ್ದರಿಂದ ವಾಯುವಿಹಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಯಲ್ಲಿ ತೊಡಗಿದ್ದರು. ರೈತ ಸಂಘಗಳು ತಯಾರಿಸಿದ ಉತ್ಪನ್ನಗಳು, ಬಿತ್ತನೆ ಬೀಜಗಳು, ಸಿರಿಧಾನ್ಯದ ಮೌಲ್ಯವರ್ಧಿತ ಉತ್ಪನ್ನಗಳು, ಸಾವಯವ ಉತ್ಪನ್ನಗಳು, ಸುಗಂಧ ಮತ್ತು ಔಷಧೀಯ ಸಸ್ಯಗಳು, ಜೈವಿಕ ಗೊಬ್ಬರಗಳು, ಕೃಷಿ ಯಂತ್ರೊಪಕರಣ, ಎರೆಹುಳು ಗೊಬ್ಬರ, ಸಸ್ಯ ಸಂರಕ್ಷಣೆ, ಜೈವಿಕ ಕೀಟನಾಶಕಗಳು, ಕರಕುಶಲ ವಸ್ತುಗಳು, ಗೋವಿನ ಉತ್ಪನ್ನಗಳು, ಅಡಕೆ ಮತ್ತು ಜೇನು ಕೃಷಿ ಸಂಬಂಧಿತ ವಸ್ತುಗಳು ನಗರದ ಜನರನ್ನು ಸೆಳೆದವು.

ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ವಿ.ಸುರೇಶ್ ಸಂತೆಯ ಕುರಿತು ಮಾತನಾಡಿ, ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇರ ಮಾರುಕಟ್ಟೆಯಿಂದ ಕೃಷಿಕರಿಗೆ ಹೆಚ್ಚಿನ ಆದಾಯ ಕಲ್ಪಿಸುವಲ್ಲಿ ರೈತ ಸಂತೆ ಸಹಕಾರಿಯಾಗಿದೆ. ಈ ಮೂಲಕ ರೈತರು ತಾವು ಬೆಳೆದ ಉತ್ಪನ್ನಗಳನ್ನು ನೇರ ಮಾರಾಟಮಾಡಿ ಆರ್ಥಿಕವಾಗಿ ಸಧೃಢರಾಗಬಹುದು ಎಂದು ಹೇಳಿದ್ದಾರೆ.


Share It

You cannot copy content of this page