ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಉಲ್ಬಣಗೊಳ್ಳುತ್ತಿರುವ ಬೆನ್ನಲ್ಲೇ ಶಾಲೆಗಳು ಪ್ರಾರಂಭಗೊಳ್ಳುತ್ತಿವೆ. ಈ ಹಿನ್ನಲೆಯಲ್ಲಿ ವಿದ್ಯಾರ್ಥಿಗಳಿಗೆ ಕೆಮ್ಮು, ಶೀತ, ಜ್ವರ ಸೇರಿದಂತೆ ಇತರೆ ಸೋಂಕು ಮನೆಯವರಿಗಿದ್ದರೂ ಸಹ ಮಾಸ್ಕ್ ಅನ್ನು ಧರಿಸಿಕೊಂಡು ಬರಬೇಕು ಎಂದು ಖಾಸಗಿ ಶಾಲೆಗಳು ಸೂಚಿಸಿವೆ.
ಈ ಕುರಿತು ಮಾತನಾಡಿರುವ ಖಾಸಗಿ ಶಾಲೆಗಳ ಒಕ್ಕೂಟ ರೂಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ, ಮಕ್ಕಳ ಆರೋಗ್ಯದ ಬಗ್ಗೆ ನಿಗಾ ವಹಿಸಲು ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಕೆಮ್ಮು, ಶೀತ, ಜ್ವರ ಸೇರಿದಂತೆ ಇತರೆ ಸೋಂಕು ಇದ್ದರೆ ಅವರು ಶಾಲೆಗೆ ಬರುವುದು ಬೇಡ. ಮನೆಗಳಲ್ಲಿ ಯಾರಿಗಾದರೂ ಈ ರೀತಿಯ ಸೋಂಕಿನ ಲಕ್ಷಣಗಳು ಕಂಡುಬಂದಲ್ಲಿ ಅಂತಹ ಮಕ್ಕಳಿಗೆ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ಶಾಲೆ ಗೇಟ್‌ಗಳ ಬಳಿಯಲ್ಲೇ ಶಿಕ್ಷಕರು, ವಿದ್ಯಾರ್ಥಿಗಳನ್ನು ಗಮನಿಸಿ, ಆರೋಗ್ಯವಿರುವ ಮಕ್ಕಳನ್ನು ಹೊರತುಪಡಿಸಿ, ಕೆಮ್ಮು, ಶೀತ, ಜ್ವರ ಲಕ್ಷಣಗಳು ಕಂಡುಬಂದಲ್ಲಿ ಅಂತಹ ಮಕ್ಕಳಿಗೆ ಮಾಸ್ಕ್ ಕಡ್ಡಾಯಗೊಳಿಸಲಿದ್ದಾರೆ. ತೀವ್ರ ರೋಗ ಲಕ್ಷಣಗಳು ಕಾಣಿಸಿದರೆ ಆ ಮಕ್ಕಳನ್ನು ವಾಪಸ್ಸು ಕಳಿಸಲು ಈಗಾಗಲೇ ಸೂಚಿಸಲಾಗಿದೆ. ಸ್ಯಾನಿಟೈಸ್ ಬಳಕೆ ಮಾಡಬೇಕು. ಸ್ವಚ್ಛತೆ ಕಾಪಾಡಬೇಕು ಸೇರಿದಂತೆ ಹಲವು ಮುಂಜಾಗೃತಾ ದೃಷ್ಟಿಯಿಂದ ಖಾಸಗಿ ಶಾಲೆ ಸಂಘಗಳು ಮತ್ತು ರೂಪ್ಸಾ ಕೆಲ ಕ್ರಮಗಳನ್ನು ಪಾಲಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.