Education News

ಲಿವರ್‌ಪೂಲ್‌ ವಿಶ್ವವಿದ್ಯಾಲಯದ ಮೊದಲ ಸಾಗರೋತ್ತರ ಕ್ಯಾಂಪಸ್‌ಗೆ ನೆಲೆ ಕಲ್ಪಿಸಲಿದೆ ಸಿಲಿಕಾನ್ ಸಿಟಿ ಬೆಂಗಳೂರು

Share It

ಬೆಂಗಳೂರು: ಇಂಗ್ಲೆಂಡ್‌ನ ಪ್ರತಿಷ್ಠಿತ ರಸೆಲ್ ಗ್ರೂಪ್‌ನ ಭಾಗವಾಗಿರುವ ಲಿವರ್‌ಪೂಲ್ ವಿಶ್ವವಿದ್ಯಾಲಯ ಸಿಲಿಕಾನ್ ಸಿಟಿಯಲ್ಲಿ ತನ್ನ ಮೊದಲ ಸಾಗರೋತ್ತರ ಕ್ಯಾಂಪಸ್ ಆರಂಭಿಸುವುದಾಗಿ ಇಂದು ಪ್ರಕಟಿಸಿದೆ. ವಿದೇಶಿ ವಿಶ್ವವಿದ್ಯಾಲಯದ ಮೊದಲ ಕ್ಯಾಂಪಸ್‌ 2026ರ ವೇಳೆಗೆ ಕಾರ್ಯನಿರ್ವಹಿಸಲಿದೆ.

ಉನ್ನತ ಶಿಕ್ಷಣ ಕ್ಷೇತ್ರದಲ್ಲಿನ ಇಂಗ್ಲೆಂಡ್‌ ಹಾಗೂ ಭಾರತದ ನಡುವಣ ಬಾಂಧವ್ಯದಲ್ಲಿನ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದ ಸಮಾರಂಭಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜ್ಯ ಸರ್ಕಾರದ ಹಿರಿಯ ಸಚಿವರು, ವಿಶ್ವವಿದ್ಯಾಲಯದ ಉನ್ನತ ಅಧಿಕಾರಿಗಳು ಸಾಕ್ಷಿಯಾದರು. ವಿಶ್ವವಿದ್ಯಾಲಯದ ಈ ನಿರ್ಧಾರ ಸ್ವಾಗತಿಸಿದ ಸಚಿವರುಗಳು ಕ್ಯಾಂಪಸ್‌ ಕಾರ್ಯಾರಂಭಕ್ಕೆ ತಮ್ಮ ಇಲಾಖೆಗಳ ವತಿಯಿಂದ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ ಪಾಟೀಲ್, ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಪ್ರಮುಖರಾಗಿ ಸಮಾರಂಭದಲ್ಲಿ ಭಾಗವಹಿಸಿದ್ದರು.

ಬೆಂಗಳೂರಿನಲ್ಲಿ ಅಸ್ತಿತ್ವಕ್ಕೆ ಬರಲಿರುವ ಈ ಕ್ಯಾಂಪಸ್, ಉನ್ನತ ಶಿಕ್ಷಣದ ವಿಶ್ವ ದರ್ಜೆಯ ಕಲಿಕಾ ಕೇಂದ್ರವಾಗಿ ಉದ್ಯಾನ ನಗರದ ಖ್ಯಾತಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ. ಲಿವರ್‌ಪೂಲ್‌ ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್ ಸಂಶೋಧನೆಗೆ ಒತ್ತು ನೀಡುವ ಸಂಸ್ಕೃತಿಗೆ ಮತ್ತು ಅಂತರರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ಶೈಕ್ಷಣಿಕ ಮಾನದಂಡಗಳಿಗೆ ನೆಲೆಯಾಗಿರಲಿದೆ.

ಭಾರತ ಮತ್ತು ಇಂಗ್ಲೆಂಡ್‌ನ ಪ್ರವರ್ಧಮಾನಕ್ಕೆ ಬರುತ್ತಿರುವ ಕೈಗಾರಿಕೆಗಳ ಅಗತ್ಯಗಳಿಗೆ ವಿದ್ಯಾರ್ಥಿಗಳು ಮತ್ತು ಸಂಶೋಧಕರನ್ನು ಸನ್ನದ್ಧಗೊಳಿಸುವ ಕರ್ನಾಟಕದ ಕ್ರಿಯಾಶೀಲ ಹಾಗೂ ನಾವೀನ್ಯತೆಯ ಶೈಕ್ಷಣಿಕ ಪರಿಸರದ ಜೊತೆಗೆ ಪಾಲುದಾರಿಕೆ ಬಲಪಡಿಸಲು ವೇಗವರ್ಧಕವಾಗಿಯೂ ಕ್ಯಾಂಪಸ್, ಕಾರ್ಯನಿರ್ವಹಿಸಲಿದೆ.

ಆರಂಭಿಕ ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಬಿಸಿನೆಸ್‌ ಮ್ಯಾನೇಜ್‌ಮೆಂಟ್‌, ಲೆಕ್ಕಪತ್ರ ನಿರ್ವಹಣೆ ಮತ್ತು ಹಣಕಾಸು, ಕಂಪ್ಯೂಟರ್ ವಿಜ್ಞಾನ, ಬಯೊಮೆಡಿಕಲ್‌ ಸೈನ್ಸ್‌, ಮತ್ತು ಗೇಮ್ ಡಿಸೈನ್‌ ಸೇರಿವೆ. ತದನಂತರದ ಹಂತಗಳಲ್ಲಿ ವೈವಿಧ್ಯಮಯ ಬೋಧನಾ ವಿಷಯಗಳನ್ನು ಸೇರ್ಪಡೆ ಮಾಡುವ ನಿರೀಕ್ಷೆ ಇದೆ.


Share It

You cannot copy content of this page