Law News

ಕಾನೂನು ಶಿಕ್ಷಣದಲ್ಲಿ ಕನ್ನಡ ಭಾಷೆ ಬಳಸಿ: ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಗ್ರಹ

Share It

ಬೆಂಗಳೂರು: ನ್ಯಾಯವಾದಿಗಳಾಗಲು ಅಸಂಖ್ಯ ಗ್ರಾಮೀಣ ಪ್ರತಿಭೆಗಳಿಗೆ ಇಚ್ಛೆ ಇದ್ದು, ಕಾನೂನು ಶಿಕ್ಷಣವನ್ನು ಕನ್ನಡದಲ್ಲಿ ಕಲಿಯಲು ಸಾಧ್ಯತೆಗಳಿಲ್ಲದಿರುವುದರಿಂದ ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚುವ ಅವಕಾಶದಿಂದ ವಂಚಿತರಾಗುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಯುಜಿಸಿ ಕಾನೂನು ಶಿಕ್ಷಣವನ್ನು ಪ್ರಾದೇಶಿಕ ಭಾಷೆಗಳಲ್ಲಿಯೂ ನೀಡುವ ವ್ಯವಸ್ಥೆ ಜಾರಿಗೆ ತರಬೇಕು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಗ್ರಹಿಸಿದೆ.

ಈ ಕುರಿತಂತೆ ಯುಜಿಸಿ ಅಧ್ಯಕ್ಷರಿಗೆ ಪತ್ರ ಬರೆದಿರುವ ಪ್ರಾಧಿಕಾರ ಅಧ್ಯಕ್ಷ ಡಾ ಪುರುಷೋತ್ತಮ್ ಬಿಳಿಮಲೆ, ಪ್ರಸ್ತುತ ಎಲ್.ಎಲ್.ಎಂ, ಎಲ್.ಎಲ್.ಬಿ ಮತ್ತು ಸಂಭಂಧಿಸಿದ ಪಿ.ಎಚ್.ಡಿ ಪಡೆಯಲು ಕೇವಲ ಆಂಗ್ಲ ಭಾಷೆಯಲ್ಲಿ ಅಭ್ಯಸಿಸುವ ಅವಕಾಶವಿದ್ದು, ಶಿಕ್ಷಣ ಸಂಸ್ಥೆಗಳು ನಿಯಮಗಳನ್ನು ಉಲ್ಲೇಖಿಸಿ ಆಂಗ್ಲ ಭಾಷೆಯ ಮೇಲೆ ಪ್ರಭುತ್ವ ಹೊಂದದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಅವಕಾಶ ವಂಚಿತರಾಗಿಸುತ್ತಿದ್ದಾರೆ. ಯುಜಿಸಿ ತನ್ನ ನಿಯಮಗಳಲ್ಲಿ ತಿದ್ದುಪಡಿಯನ್ನು ತರುವ ಮೂಲಕ ಇಂತಹ ಅಸಂಖ್ಯ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕಿದೆ ಎಂದು ಹೇಳಿದ್ದಾರೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಆಗ್ರಹದ ಮೇಲೆ ರಾಜ್ಯದ ಹಲವು ವಿಶ್ವವಿದ್ಯಾಲಯಗಳ ತಾಂತ್ರಿಕ ಶಿಕ್ಷಣ ಬೋಧನೆಯಲ್ಲಿ ಕನ್ನಡ ಪಠ್ಯವನ್ನು ಅಳವಡಿಸಿಕೊಂಡಿದ್ದು, ಇದೇ ಮಾದರಿಯ ಕ್ರಮವನ್ನು ಯುಜಿಸಿ ಅನುಸರಿಸಬಹುದಾಗಿದೆ. ಈ ನಿಟ್ಟಿನಲ್ಲಿ ಕೂಡಲೇ ಆಯೋಗವು ಪ್ರಾದೇಶಿಕ ಭಾಷೆಗಳಲ್ಲಿ ಪಠ್ಯವನ್ನು ತಯಾರಿಸಲು ಮುಂದಾಗಬೇಕಿದೆ. ಈ ಕುರಿತಂತೆ ಸಮಿತಿಯೊಂದನ್ನು ರಚಿಸಿ ಉನ್ನತ ಕಾನೂನು ಶಿಕ್ಷಣಕ್ಕೆ ನಿಗದಿಪಡಿಸಲಾಗಿರುವ ಆಂಗ್ಲ ಭಾಷೆಯ ಪಠ್ಯಕ್ರಮದ ಭಾಷಾಂತರಣೆಗೆ ಕ್ರಮವಹಿಸಬೇಕಿದೆ. ಆಸಕ್ತ ವಿದ್ಯಾರ್ಥಿಗಳಿಗೆ ಪ್ರಾದೇಶಿಕ ಭಾಷೆಯಲ್ಲಿ ಉನ್ನತ ಕಾನೂನು ಶಿಕ್ಷಣವನ್ನು ಮುಂದುವರೆಸುವ ಅವಕಾಶ ದೊರೆತಲ್ಲಿ ಉತ್ತಮ ನ್ಯಾಯದಾನ ವ್ಯವಸ್ಥೆಯನ್ನು ನಿರ್ಮಿಸಲು ಸಾಧ್ಯವಾಗಲಿದೆ. ಈ ರೀತಿಯ ತೀರ್ಮಾನದಿಂದ ಯುಜಿಸಿಯ ದೇಶಸೇವೆ ಶಾಶ್ವತವಾಗಿ ಉಳಿಯಲಿದೆ ಎಂದು ಬಿಳಿಮಲೆ ಅಭಿಪ್ರಾಯಪಟ್ಟಿದ್ದಾರೆ.


Share It

You cannot copy content of this page