‘ಗರ್ಭಧಾರಣೆಯ ಪೂರ್ವ ಮತ್ತು ಪ್ರಸವಪೂರ್ವ ರೋಗನಿರ್ಣಯ ತಂತ್ರಗಳು (ಲಿಂಗ ಆಯ್ಕೆಯ ನಿಷೇಧ) ಕಾಯ್ದೆ-1994’ ರ ಸೆಕ್ಷನ್ 28ರ ಪ್ರಕಾರ ಭ್ರೂಣಲಿಂಗ ಪತ್ತೆ ನಿಷೇಧಕ್ಕೆ ಸಂಬಂಧಿಸಿದಂತೆ ಕೇಂದ್ರ ಅಥವಾ ರಾಜ್ಯ ಸರ್ಕಾರದ ಸಕ್ಷಮ ಪ್ರಾಧಿಕಾರ ದಾಖಲಿಸಿದ ದೂರುಗಳನ್ನು ಮಾತ್ರವೇ ಮ್ಯಾಜಿಸ್ಟ್ರೇಟ್ ಕೋರ್ಟ್ ವಿಚಾರಣೆಗೆ ಪರಿಗಣಿಸಬೇಕು ಎಂದು ಹೈಕೋರ್ಟ್ ತೀರ್ಪು ನೀಡಿದೆ.
ತಮ್ಮ ವಿರುದ್ಧ ಗೋಕಾಕ್ ನ ಪ್ರಧಾನ ಸಿವಿಲ್ ಜಡ್ಜ್ ಅಂಡ್ ಜೆಎಂಎಫ್ಸಿ ಕೋರ್ಟ್ ಕೈಗೊಂಡಿರುವ ಕ್ರಿಮಿನಲ್ ಪ್ರಕರಣದ ವಿಚಾರಣಾ ಪ್ರಕ್ರಿಯೆಯನ್ನು ರದ್ದುಪಡಿಸುವಂತೆ ಕೋರಿ ಬೆಳಗಾವಿ ಜಿಲ್ಲೆ ಗೋಕಾಕ್ ಪಟ್ಟಣದ ಧೋಂಡಿಬಾ ಅಣ್ಣಾ ಜಾಧವ್ ಮೆಮೋರಿಯಲ್ ಆಸ್ಪತ್ರೆ ಹಾಗೂ ಅದರ ವೈದ್ಯರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಈ ತೀರ್ಪು ನೀಡಿದೆ.
ಪೀಠ ತನ್ನ ತೀರ್ಪಿನಲ್ಲಿ, ಮ್ಯಾಜಿಸ್ಟ್ರೇಟ್ ಕೋರ್ಟ್ ‘ಗರ್ಭಧಾರಣೆಯ ಪೂರ್ವ ಮತ್ತು ಪ್ರಸವಪೂರ್ವ ರೋಗನಿರ್ಣಯ ತಂತ್ರಗಳು (ಲಿಂಗ ಆಯ್ಕೆಯ ನಿಷೇಧ) ಕಾಯ್ದೆ-1994’ ರ ಸೆಕ್ಷನ್ 28ರ ಅಡಿ ಕಾಗ್ನಿಜೆನ್ಸ್ ತೆಗೆದುಕೊಂಡಿದೆ. ಆಸ್ಪತ್ರೆಯು ತನ್ನ ದಾಖಲೆಗಳನ್ನು ಕಾಯ್ದೆಯ ನಿಯಮಗಳಿಗೆ ಅನುಗುಣವಾಗಿ ನಿರ್ವಹಣೆ ಮಾಡಿಲ್ಲ. ಜತೆಗೆ ಆಸ್ಪತ್ರೆಯಲ್ಲಿ ಭ್ರೂಣ ಲಿಂಗ ಪತ್ತೆಗೆ ಯಂತ್ರಗಳನ್ನು ಅಳವಡಿಸಲಾಗಿದೆ ಎಂಬ ಹಿನ್ನೆಲೆಯಲ್ಲಿ ತಾಲೂಕು ಹೆಲ್ತ್ ಆಫೀಸರ್ ದಾಖಲಿಸಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಆದರೆ, ಕಾಯ್ದೆಯ ಸೆಕ್ಷನ್ 17(2) ರ ಪ್ರಕಾರ ಆಯಾ ಜಿಲ್ಲೆಯ ಸಕ್ಷಮ ಪ್ರಾಧಿಕಾರವಾಗಿ ಉಪವಿಭಾಗಾಧಿಕಾರಿಗಳನ್ನು ನೇಮಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಹಾಗೆಯೇ ಕಾಯ್ದೆಯ ಸೆಕ್ಷನ್ 28 ರಲ್ಲಿ ಕೇಂದ್ರ ಅಥವಾ ರಾಜ್ಯ ಸರ್ಕಾರ ನೇಮಿಸುವ ಸಕ್ಷಮ ಪ್ರಾಧಿಕಾರ ಅಥವಾ ಅಧಿಕಾರಿ ಸಲ್ಲಿಸುವ ದೂರಿನ ಮೇರೆಗೆ ಮಾತ್ರವೇ ಕೋರ್ಟ್ ಕಾಗ್ನಿಜೆನ್ಸ್ ತೆಗೆದುಕೊಳ್ಳುವಂತೆ ಸ್ಪಷ್ಟಪಡಿಸಿದೆ. ಹೀಗಾಗಿ, ತಾಲೂಕು ಆರೋಗ್ಯಾಧಿಕಾರಿ (ಟಿಎಚ್ಒ) ದೂರು ದಾಖಲಿಸಲು ಸಕ್ಷಮ ಪ್ರಾಧಿಕಾರವಾಗಿಲ್ಲ ಎಂದು ಅಭಿಪ್ರಾಯಪಟ್ಟು ಮ್ಯಾಜಿಸ್ಟ್ರೇಟ್ ಕಾಗ್ನಿಸೆನ್ಸ್ ತೆಗೆದುಕೊಂಡ ಆದೇಶವನ್ನು ರದ್ದುಪಡಿಸಿದೆ.
(Criminal Petition No.101392/2019)