ಬೆಂಗಳೂರು: ಮಕ್ಕಳ ಸಾಮರ್ಥ್ಯ ಗೊತ್ತಾಗಬೇಕಾದರೆ ಗ್ರೇಸ್ ಅಂಕ ಕೊಡಬಾರದು. ಗ್ರೇಸ್ ಅಂಕ ಕೊಡದೇ 2025-26ನೇ ಸಾಲಿನಲ್ಲಿ ಶೇ.75ರಷ್ಟು ಎಸ್‌ಎಸ್‌ಎಲ್‌ಸಿ ಫಲಿತಾಂಶ ದಾಖಲಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಗುರುವಾರ ನಗರದ ಆಡುಗೋಡಿಯ ಕರ್ನಾಟಕ ಸರ್ಕಾರಿ ಕನ್ನಡ ಶಾಲೆಯಲ್ಲಿ ಶಿಕ್ಷಣ ಇಲಾಖೆ ಆಯೋಜಿಸಿದ್ದ ಶಾಲಾ ಶೈಕ್ಷಣಿಕ ವರ್ಷದ ಪುನರಾರಂಭದ ಪ್ರಯುಕ್ತ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಶಾಲಾ ಕೊಠಡಿಗಳ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳು ಗುಣಮಟ್ಟದಲ್ಲಿ ಹಿಂದುಳಿದಿಲ್ಲ. ಅದಕ್ಕಾಗಿ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಈ ಬಾರಿಯೂ 725 ಕೋಟಿ ಹಣ ಕೊಟ್ಟಿದ್ದೇವೆ. ಪೋಷಕರಲ್ಲಿ ಸರ್ಕಾರಿ, ಖಾಸಗಿ ಎಂದು ತಾರತಮ್ಯ ಇರಬಾರದು. ಅದಕ್ಕಾಗಿ ಎಲ್ಲ ಸರ್ಕಾರಿ ಶಾಲೆಗಳಿಗೆ ಸುಸಜ್ಜಿತ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಮತ್ತು ಸರ್ವರಿಗೂ ಶಿಕ್ಷಣ ಕೊಡುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಶಿಕ್ಷಕರ ನೇಮಕಕ್ಕೆ ಅನುಮೋದನೆ:
ಈ ಹಿಂದೆ ಹಣಕಾಸು ಮಂತ್ರಿ ಆಗಿದ್ದ ಸಂದರ್ಭದಲ್ಲಿ 80 ಸಾವಿರ ಶಿಕ್ಷಕರ ಹುದ್ದೆ ಖಾಲಿ ಇತ್ತು. ಅಂದು ಗೋವಿಂದೇಗೌಡರು ಮಂತ್ರಿಯಾಗಿದ್ದರು. ಆಗ ನಾನು ಪ್ರತೀ ವರ್ಷ 20 ಸಾವಿರ ಶಿಕ್ಷಕರ ನೇಮಕಾತಿ ಮಾಡಿಕೊಡ್ತುತೇನೆಂದಿದ್ದೆ, ಒಂದು ರೂ. ಲಂಚವಿಲ್ಲದೆ, 1992-93 ರಲ್ಲಿ ಹಣಕಾಸು ಮಂತ್ರಿಯಾಗಿದ್ದಾಗ ಒಂದು ಲಕ್ಷ ಶಿಕ್ಷಕರನ್ನು ನೇಮಕ ಮಾಡಲು ಹಣಕಾಸು ಅನುಮೋದನೆ ನೀಡಿದ್ದೆ ಎಂದು ಹಿಂದಿನ ನೆನಪುಗಳನ್ನು ಮೆಲುಕು ಹಾಕಿದರು.