ಬೆಂಗಳೂರು: ಎನ್‌ಎಚ್‌ಎಂ ಕಾರ್ಯಕ್ರಮದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಎಂಬಿಬಿಎಸ್ ವೈದಾಧಿಕಾರಿಗಳು, ಎಸ್‌ಎನ್‌ಸಿಯು/ಐಸಿಯು ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಟಾಫ್ ನರ್ಸ್‌ಗಳು ಮತ್ತು ಮೇಜರ್ ಕ್ಲಿನಿಕಲ್ ಸ್ಪೆಷಲಿಸ್ಟ್‌ಗಳ ವೇತನವನ್ನು ಪರಿಷ್ಕರಿಸಿ ರಾಷ್ಟ್ರಿಯ ಆರೋಗ್ಯ ಅಭಿಯಾನ ಆದೇಶ ಹೊರಡಿಸಿದೆ. ಹೊಸದಾಗಿ ನೇಮಕವಾಗುವವರಿಗೆ ಮಾತ್ರ ವೇತನ ಪರಿಷ್ಕರಣೆ ಅನ್ವಯವಾಗಲಿದೆ.
ರಾಷ್ಟ್ರಿಯ ಆರೋಗ್ಯ ಅಭಿಯಾನ ಯೋಜನೆಯಡಿ ಎಂಬಿಬಿಎಸ್ ವೈದ್ಯರು, ತಜ್ಞ ವೈದ್ಯರು, ವಿಶೇಷ ನವಜಾತ ಶಿಶು ಆರೈಕೆ ಘಟಕ(ಎಸ್‌ಎನ್‌ಸಿಯು) ಮತ್ತು ತೀವ್ರ ನಿಗಾ ಘಟಕ(ಐಸಿಯು)ದಲ್ಲಿ ಕಾರ್ಯನಿರ್ವಹಿಸುವ ಸ್ಟಾಫ್ ನರ್ಸ್‌ಗಳ ವೇತನ ಕಡಿಮೆಯಿರುವ ಕಾರಣ ಅನೇಕ ವೈದ್ಯರ ಹುದ್ದೆಗಳು ಖಾಲಿ ಉಳಿದಿತ್ತು. ಹೀಗಾಗಿ ವೇತನವನ್ನು ಪರಿಷ್ಕರಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ಹೊಸ ಆದೇಶದನ್ವಯ ಯೋಜನೆಯಡಿ ಎಂಬಿಬಿಎಸ್ ವೈದ್ಯರಿಗೆ ಪ್ರಸ್ತುತ 46,895 ರೂ.ಗಳಿಂದ 50 ಸಾವಿರ ರೂ. ನೀಡಲಾಗುತ್ತಿತ್ತು, ಇದನ್ನು 60 ಸಾವಿರ ರೂ.ಗಳಿಗೆ ಹೆಚ್ಚಿಸಲಾಗಿದೆ. ತಜ್ಞ ವೈದ್ಯರಿಗೆ 1.10 ಲಕ್ಷ ರೂ.ಗಳಿಂದ 1.30 ಲಕ್ಷ ರೂ.ಗಳನ್ನು ನೀಡಲಾಗುತ್ತಿತ್ತು, ಅದನ್ನು 1.40 ಲಕ್ಷ ರೂ. ಗಳಿಗೆ ಹೆಚ್ಚಳ ಮಾಡಲಾಗಿದೆ. ಹಾಗೆಯೇ ಇವರಿಗೆ ಪ್ರತೀ ವರ್ಷದ ಅನುಭವಕ್ಕೆ ಶೇ.2.5ಕ್ಕೆ ಹೆಚ್ಚಳವಾಗಲಿದೆ. ಸ್ಟಾಫ್ ನರ್ಸ್‌ಗಳ ಪ್ರಸ್ತುತ ವೇತನವು 14,186 ರೂ.ಗಳಿಂದ 18,774 ರೂ. ಇದ್ದು, ಅವರಿಗೂ ಕೂಡ 22 ಸಾವಿರ ರೂ. ನೀಡಲಾಗಲಿದೆ.