ಬೆಂಗಳೂರು: ಮಹಿಳೆಯೊಬ್ಬರಿಂದ ವಂಚನೆ ಆರೋಪದ ಮೇಲೆ ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ನಗರದ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
2023 ರಲ್ಲಿ ದೂರುದಾರೆ ಲಕ್ಷ್ಮಿಅವರಿಗೆ ನಿರ್ಮಾಪಕ ಸೂರಪ್ಪ, ನಟ ಶಿವರಾಜ್ ಕುಮಾರ್, ಗಣೇಶ್ ಜತೆ ಚಲನಚಿತ್ರ ಮಾಡುತ್ತಿದ್ದೇನೆ, ಚಿತ್ರ ನಿರ್ಮಾನಕ್ಕೆ ಸಾಲ ಬೇಕೆಂದು ಸೂರಪ್ಪ ಕೇಳಿದ್ದು, ಹಂತ-ಹಂತವಾಗಿ ಸುಮಾರು 92 ಲಕ್ಷ ರೂ.ಗಳನ್ನು ಪಡೆದಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಹಣ ಪಡೆದುಕೊಂಡು ನಂತರ ಸೂರಪ್ಪ, ಲಕ್ಷ್ಮಿಗೆ ಸಂಪರ್ಕಕ್ಕೆ ಸಿಗಲಿಲ್ಲ. ಈ ವೇಳೆ ವಿಚಾರಿಸಿದಾಗ ಸೂರಪ್ಪ, ನಟ ಶಿವರಾಜ್ ಕುಮಾರ್ ಅವರೊಂದಿಗೆ ಚಿತ್ರ ಮಾಡುತ್ತಿಲ್ಲ ಎಂಬ ಸತ್ಯ ಬಯಲಾಗಿದೆ. ಇದರಿಂದ ಹಣ ವಾಪಸ್ ಕೇಳಿದಾಗ 25 ಲಕ್ಷ ರೂ. ವಾಪಸ್ಸು ನೀಡಿದ್ದರು ಎನ್ನಲಾಗಿದೆ. ಉಳಿದ ಹಣ ಕೇಳಿದಾಗ, ಸೂರಪ್ಪ ಬೆದರಿಕೆಯೊಡ್ಡಿದ್ದಾರೆ. ಹೀಗಾಗಿ ಸೂರಪ್ಪ ವಿರುದ್ಧ ಪ್ರಕರಣ ದಾಖಲಾಗಿದೆ. ಸದ್ಯ ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.