ಬೆಂಗಳೂರು: ಗೃಹ ಆರೋಗ್ಯ ಯೋಜನೆ ರಾಜ್ಯದಾದ್ಯಂತ ವಿಸ್ತರಣೆಯಾಗುತ್ತಿದ್ದು, ಯೋಜನೆಯಡಿ 14 ಅಸಾಂಕ್ರಾಮಿಕ ರೋಗಗಳ ತಪಾಸಣೆ ಕೈಗೆತ್ತಿಕೊಳ್ಳಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ವಿಕಾಸ ಸೌಧದಲ್ಲಿ ಸೋಮವಾರ ಗೃಹ ಆರೋಗ್ಯ ಯೋಜನೆ ಅನುಷ್ಠಾನ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತಾನಾಡಿದ ಅವರು, ಅಸಾಂಕ್ರಾಮಿಕ ರೋಗಗಳು ಜನರ ಜೀವಕ್ಕೆ ಅಪಾಯ ತಂದೊಡ್ಡಿವೆ. ಖಾಸಗಿ ಆರೋಗ್ಯ ವಯಲದಲ್ಲಿ ಚಿಕಿತ್ಸೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಆದರೆ ಅಸಾಂಕ್ರಾಮಿಕ ರೋಗಗಳನ್ನು ಮುಂಚಿತವಾಗಿಯೇ ತಡೆಗಟ್ಟುವುದು ಮುಖ್ಯವಾಗಿದೆ. ಈ ಕಾರ್ಯವನ್ನು ಸರ್ಕಾರವೇ ಮಾಡಬೇಕು ಹೊರತಾಗಿ ಬೇರೆ ಯಾರು ಆಸಕ್ತಿ ತೋರುವುದಿಲ್ಲ. ಹೀಗಾಗಿ ಒಂದು ಜವಾಬ್ದಾರಿಯುತ ಸರ್ಕಾರವಾಗಿ ಆರೋಗ್ಯ ಇಲಾಖೆಯಿಂದ ಅಸಾಂಕ್ರಾಮಿಕ ರೋಗಗಳನ್ನ ತಡೆಗಟ್ಟುವತ್ತ ಗೃಹ ಆರೋಗ್ಯ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಲಾಗುತ್ತಿದೆ. ಎಲ್ಲ ಮನೆಗಳಲ್ಲಿ 30 ವರ್ಷ ಮೇಲ್ಪಟ್ಟವರನ್ನ ತಪಾಸಣೆಗೆ ಒಳಪಡಿಸಿ, ಸೂಕ್ತ ಔಷಧಗಳನ್ನ ಅವರ ಬಳಿಗೆ ತಲುಪಿಸುವ ಕಾರ್ಯ ಪ್ರಾರಂಭಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಗೃಹ ಆರೋಗ್ಯ ಯೋಜನೆಯನ್ನು ಮೊದಲು ಕೋಲಾರ ಜಿಲ್ಲೆಯಲ್ಲಿ ಮಾತ್ರ ಪ್ರಾರಂಭಿಸಿದಾಗ ಹಲವು ಸಂಗತಿಗಳು ಬೆಳಕಿಗೆ ಬಂದವು. ಅವೆಲ್ಲವನ್ನು ತುಲನೆ ಮಾಡಿ ಯೋಜನೆಯಲ್ಲಿ ಒಂದಿಷ್ಟು ಬದಲಾವಣೆಗಳನ್ನು ತರಲಾಗಿದೆ. ಆಶಾ ಕಾರ್ಯಕರ್ತರಿಂದ ಹಿಡಿದು ಸಮುದಾಯ ಆರೋಗ್ಯ ಅಧಿಕಾರಿಗಳಿಗೆ ಜವಾಬ್ದಾರಿಗಳನ್ನು ವಹಿಸಿ, ಸ್ಪಷ್ಟ ಮಾಹಿತಿಯುಳ್ಳ ಕೈಪಿಡಿ ನೀಡಿದ್ದೇವೆ. ತಪಾಸಣೆ ಬಳಿಕ ರೋಗಿಗಳ ಮೇಲ್ವಿಚಾರಣೆ ಕೂಡ ನಡೆಯಬೇಕು. ಆ ನಿಟ್ಟಿನಲ್ಲಿ ವ್ಯವಸ್ಥಿತವಾಗಿ ಯಾರು ಏನು ಮಾಡಬೇಕು ಎಂಬ ಸ್ಪಷ್ಟ ಚಿತ್ರಣವನ್ನು ಆರೋಗ್ಯ ಸಿಬ್ಬಂದಿಗಳಿಗೆ ನೀಡಲಾಗಿದೆ ಎಂದರು.
ಯೋಜನೆಯಲ್ಲಿ 30 ವರ್ಷ ಮೇಲ್ಪಟ್ಟ ವಯಸ್ಸಿನ ವ್ಯಕ್ತಿಗಳಿಗೆ ಉಚಿತವಾಗಿ ಪ್ರಮುಖ ಅಸಾಂಕ್ರಾಮಿಕ ರೋಗಗಳಾದ ಮಧುಮೇಹ, ರಕ್ತದೊತ್ತಡ, ಮತ್ತು ಬಾಯಿ, ಸ್ತನ, ಗರ್ಭಕಂಠದ ಕ್ಯಾನ್ಸರ್ ರೋಗಗಳ ತಪಾಸಣೆ ಮತ್ತು ನಿರ್ವಹಣೆಯನ್ನು ನಡೆಸಲಾಗುವುದು. ಆಶಾ ಕಾರ್ಯಕರ್ತೆಯರು ಪ್ರತಿ ಮನೆ ಮನೆಗೆ ತೆರಳಿ ಜನರಲ್ಲಿ ಅಸಾಂಕ್ರಾಮಿಕ ರೋಗಗಳ ಕುರಿತು ಜಾಗೃತಿ ಮೂಡಿಸುವುದರ ಜೊತೆಗೆ ಆಯುಷ್ಮಾನ್ ಆರೋಗ್ಯ ಮಂದಿರಗಳಲ್ಲಿ ಸಮುದಾಯ ಆರೋಗ್ಯಾಧಿಕಾರಿಗಳ ಮೂಲಕ ತಪಾಸಣಾ ಕಾರ್ಯಕ್ಕೆ ನೆರವಾಗುವರು. ಸಮುದಾಯ ಆರೋಗ್ಯ ಅಧಿಕಾರಿಗಳು ತಪಾಸಣೆ ನಡೆಸಿ ಎನ್.ಸಿ. ಡಿ ಪೊರ್ಟಲ್ ನಲ್ಲಿ ಡೇಟಾ ನಮೂದಿಸಲಿದ್ದು, ರಕ್ತದೊತ್ತಡ, ಡಯಾಬಿಟಿಸ್ ಹೊಂದಿದವರಿಗೆ ಸ್ಥಳದಲ್ಲೇ ಔಷಧಿಗಳನ್ನು ಉಚಿತವಾಗಿ ಒದಗಿಸುವ ವ್ಯವಸ್ಥೆಯನ್ನ ಗೃಹ ಆರೋಗ್ಯ ಯೋಜನೆಯಲ್ಲಿ ಕಲ್ಪಿಸಲಾಗಿದೆ. ಪ್ರತಿ ಜಿಲ್ಲೆಗಳ ಹಂತದಲ್ಲಿ ಆರೋಗ್ಯ ಸಿಬ್ಬಂದಿಗಳಿಗೆ ಗೃಹ ಆರೋಗ್ಯ ತರಬೇತಿ ಕಾರ್ಯಾಗಾರಗಳನ್ನ ಹಮ್ಮಿಕೊಳ್ಳಲಾಗಿದೆ ಎಂದು ಇದೇ ವೇಳೆ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.