ಬೆಂಗಳೂರು: ಬದುಕಿ ಬಾಳಬೇಕಿದ್ದ ನಮ್ಮ ಮನೆಯ ಮಕ್ಕಳು ಕಾಲ್ತುಳಿತಕ್ಕೆ ಬಲಿಯಾಗಿರುವುದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ದುರ್ಘಟನೆಯಿಂದ ಜೀವಹಾನಿಯಾಗಿದೆ. ಬೆಂಗಳೂರು ಹಾಗೂ ಕರ್ನಾಟಕ ರಾಜ್ಯದ ಘನತೆಗೆ ಧಕ್ಕೆಯಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ಮಾಡಿ ಲೋಪದೋಷ ಸರಿಪಡಿಸಲಾಗುವುದು. ಇದರಿಂದ ನಾವು ಪಾಠವನ್ನು ಕಲಿಯಬೇಕಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಭಾವುಕರಾದರು.
ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು, ನಮ್ಮ ರಾಜ್ಯದಲ್ಲಿ ಇಂತಹ ದುರ್ಘಟನೆ ನಡೆಯುತ್ತದೆ ಎಂದು ನಾವ್ಯಾರೂ ನಿರೀಕ್ಷೆ ಮಾಡಿರಲಿಲ್ಲ. ಆರ್.ಸಿ.ಬಿ ತಂಡ ಬೆಂಗಳೂರಿಗೆ ಬರುತ್ತಿರುವುದಾಗಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು. ನಮ್ಮ ಸರ್ಕಾರದ ಮುಂದೆ ಬೇರೆ ಆಯ್ಕೆ ಇರಲಿಲ್ಲ. ಈ ದುರ್ಘಟನೆ ನಡೆದಿರುವುದು ನಮ್ಮ ಕುಟುಂಬದಲ್ಲೇ ಎಂದು ಭಾವಿಸಿದ್ದೇವೆ. ದುರ್ಘಟನೆಯಲ್ಲಿ ಮೃತಪಟ್ಟವರು ನಮ್ಮ ಮನೆಯವರೇ ಮೃತಪಟ್ಟಿದ್ದಾರೆ ಎಂಬ ನೋವು ರಾಜ್ಯದಲ್ಲಿ ತುಂಬಿದೆ. ಈ ನೋವನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಸತ್ತವರು ನಮ್ಮ ಕುಟುಂಬದ ಸದಸ್ಯರು. ಈ ಪರಿಸ್ಥಿತಿಯಲ್ಲಿ ನಾವು ಸಂತಾಪ ಸೂಚಿಸಬೇಕು. ರಾಜಕೀಯ ಮಾಡಬಾರದು. ಈ ದುರ್ಘಟನೆಯ ಹೊಣೆಯನ್ನು ಒಬ್ಬರೂ ಇಬ್ಬರ ಮೇಲೆ ಹಾಕಲು ಆಗುವುದಿಲ್ಲ ಎಂದು ತಿಳಿಸಿದರು.
18 ವರ್ಷಗಳ ಕಾಲ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಲ್ಲಿ ಸಂತೋಷ ಕಟ್ಟೆಯೊಡೆದಿತ್ತು. ಹೀಗಾಗಿ ಅಪಾರ ಸಂಖ್ಯೆಯಲ್ಲಿ ಜನ ಸೇರಿದರು ಹೀಗಾಗಿ ಪರಿಸ್ಥಿತಿ ವಿಕೋಪಕ್ಕೆ ಹೋಯಿತು. ನಿನ್ನೆ ಆಸ್ಪತ್ರೆಯಲ್ಲಿ ಮೃತರ ಪೋಷಕರು ಮರಣೋತ್ತರ ಪರೀಕ್ಷೆ ಮಾಡಬೇಡಿ. ನಮ್ಮ ಮಗುವಿನ ಮೃತದೇಹ ನಮಗೆ ಕೊಡಿ ಎಂದು ಅಂಗಲಾಚಿದರು. ನಾವು ಆ ರೀತಿ ಪರೀಕ್ಷೆ ಮಾಡದೇ ಮೃತದೇಹವನ್ನು ಹಸ್ತಾಂತರ ಮಾಡಲು ಹೇಗೆ ಸಾಧ್ಯ? ಇದರಿಂದ ನಾಳೆ ಕಾನೂನಾತ್ಮಕ ಸಮಸ್ಯೆಗಳು ಎದುರಾಗುತ್ತವೆ. ಈ ಸಾವು ಯಾವ ಕಾರಣಕ್ಕೆ ಆಗಿದೆ ಎಂಬ ವೈಜ್ಞಾನಿಕ ವರದಿ ಬೇಕು ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಬಿಜೆಪಿಯವರ ಹೇಳಿಕೆಗೆ ಉತ್ತರಿಸುವ ಅಗತ್ಯವಿಲ್ಲ. ಅವರ ಹೇಳಿಕೆಗಳು ಅಸಂಬದ್ಧ, ರಾಜಕೀಯ ಮಾಡುವುದರಲ್ಲಿ ಅವರು ಮಾಸ್ಟರ್ ಮೈಂಡ್ ಗಳು. ಕುಮಾರಸ್ವಾಮಿ ಹಾಗೂ ಬಿಜೆಪಿಯವರು ಹೆಣದ ಮೇಲೆ ರಾಜಕೀಯ ಮಾಡುತ್ತಿದ್ದಾರೆ. ಇದೇ ಅವರ ವೃತ್ತಿಯಾಗಿದೆ. ಅವರ ಆಡಳಿತ ಅವಧಿಯಲ್ಲಿ ಏನೆಲ್ಲಾ ಆಗಿದೆ ಎಂದು ಪಟ್ಟಿ ನೀಡಬಹುದು. ಆದರೆ ಅವರ ಮಟ್ಟಕ್ಕೆ ಇಳಿದು ರಾಜಕಾರಣ ಮಾಡಲು ನನಗೆ ಇಚ್ಛೆ ಇಲ್ಲ. ಆದರೆ ಬಾಳಿ ಬದುಕಬೇಕಾಗಿದ್ದ 14-15 ವರ್ಷದ ಮಕ್ಕಳು ಸತ್ತಿರುವುದನ್ನು ಕಣ್ಣಾರೆ ನೋಡಿದ್ದೇನೆ. ಇದನ್ನು ಯಾವುದೇ ಕುಟುಂಬ ಅರಗಿಸಿಕೊಳ್ಳಲು ಸಾಧ್ಯವಿಲ್ಲ. ಪೊಲೀಸ್ ಆಯುಕ್ತರು ಈ ಕಾರ್ಯಕ್ರಮವನ್ನು 10 ನಿಮಿಷಗಳಲ್ಲಿ ಮುಗಿಸಿ ಎಂದು ಹೇಳಿದರು. ನಾನು ಕೂಡ ಆರ್.ಸಿ.ಬಿ ತಂಡದ ಜೊತೆ ಮಾತನಾಡಿ ಕಾರ್ಯಕ್ರಮವನ್ನು ಮೊಟಕುಗೊಳಿಸಿದೆ ಎಂದು ಮಾಹಿತಿ ನೀಡಿದರು.
ಈ ಘಟನೆ ಬಗ್ಗೆ ರಾಜಕೀಯದವರು ಏನೇ ಟೀಕೆ ಮಾಡಿದರೂ ಲೆಕ್ಕ ಇಲ್ಲ. ಅವರ ಚೇಷ್ಟೆ ಇದ್ದಿದ್ದೆ. ಸಿ.ಟಿ ರವಿ, ಕುಮಾರಸ್ವಾಮಿ, ಅಶೋಕ್ ಸೇರಿದಂತೆ ಎಲ್ಲರದ್ದು ಕೇವಲ ರಾಜಕಾರಣ. ಇದೆಲ್ಲದಕ್ಕೂ ಬೇರೆ ಸಮಯದಲ್ಲಿ ಚರ್ಚೆ ಮಾಡುತ್ತೇನೆ. ಅಧಿವೇಶನದಲ್ಲಿ ಈ ವಿಚಾರ ಚರ್ಚೆಗೆ ಬಂದಾಗ ಅವರ ಕಾಲದಲ್ಲಿ ಏನಾಗಿತ್ತು ಎಂದು ನಾನು ಪ್ರಸ್ತಾಪ ಮಾಡುತ್ತೇನೆ. ಈಗ ರಾಜಕಾರಣ ಮಾಡುವುದಿಲ್ಲ. ಮಾಧ್ಯಮದವರು ಕೂಡ ಈ ಸಂದರ್ಭದಲ್ಲಿ ರಾಜಕೀಯ ವಿಚಾರಗಳನ್ನು ಪ್ರಸ್ತಾಪ ಮಾಡಬೇಡಿ. ರಾಜಕುಮಾರ್ ಅವರು ಸತ್ತಾಗ ಏನೆಲ್ಲಾ ಆಯಿತು ಎಂದು ನಾನು ಈಗ ಮಾತನಾಡಲು ಬಯಸುವುದಿಲ್ಲ. ಅಂತಹ ನೀಚ ರಾಜಕಾರಣ ಮಾಡಲು ನನಗೆ ಇಷ್ಟವಿಲ್ಲ. ಬಿಜೆಪಿ ಹಾಗೂ ಜೆಡಿಎಸ್ ಸದಾ ಹೆಣದ ಮೇಲೆ ರಾಜಕೀಯ ಮಾಡುತ್ತಾರೆ. ಇದೇ ಅವರ ರಾಜಕೀಯ ಅಜೆಂಡಾ ಎಂದು ತಿರುಗೇಟು ನೀಡಿದರು.