News

ಆಕಸ್ಮಿಕವಾಗಿ ಆದ ದುರ್ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಬೇಕೇ ಹೊರತು ರಾಜಕೀಯ ಮಾಡಬಾರದು: ಡಿ.ಕೆ.ಸುರೇಶ್

Share It

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತದಿಂದ 11 ಜನ ಮೃತಪಟ್ಟಿರುವ ದುರ್ಘಟನೆ ಆಕಸ್ಮಿಕವಾಗಿ ನಡೆದಿದೆ. ಈ ದುರ್ಘಟನೆಗೆ ವಿಷಾದ ವ್ಯಕ್ತಪಡಿಸಿ, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಬೇಕೇ ಹೊರತು ಇದರಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಬಾರದು ಎಂದು ನಿಕಟಪೂರ್ವ ಸಂಸದ ಡಿ.ಕೆ. ಸುರೇಶ್ ತಿಳಿಸಿದರು.

ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಸುರೇಶ್ ಅವರು ಗುರುವಾರ ಪ್ರತಿಕ್ರಿಯೆ ನೀಡಿ, ಆರ್.ಸಿ.ಬಿ ಗೆಲುವಿನ ಸಂಭ್ರಮದಲ್ಲಿನ ಕಾಲ್ತುಳಿತಕ್ಕೆ ಸರ್ಕಾರವೇ ಹೊಣೆ ಎಂಬ ವಿರೋಧ ಪಕ್ಷಗಳ ಟೀಕೆ ಬಗ್ಗೆ ಕೇಳಿದಾಗ, ಈ ದುರಂತಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ. ಸಂಭ್ರಮಾಚರಣೆ ವೇಳೆ ಇಂತಹ ದುರಂತ ಸಂಭವಿಸಬಾರದಿತ್ತು.18 ವರ್ಷಗಳಲ್ಲಿ ಮೂರು ಬಾರಿ ಐಪಿಎಲ್ ಫೈನಲ್ ತಲುಪಿದ್ದರೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಈ ಬಾರಿ ರಾಜ್ಯದಲ್ಲಿ ಮಾತ್ರವಲ್ಲ ದೇಶದಾದ್ಯಂತ ಈ ಗೆಲುವಿಗೆ ಅಭಿಮಾನಿಗಳು ಪ್ರಾರ್ಥನೆ ಮಾಡಿದ್ದರು. ಆರ್.ಸಿ.ಬಿ ತಂಡ ಗೆಲುವಿನ ಸಂಭ್ರಮಾಚರಣೆಯಲ್ಲಿ 11 ಮಂದಿ ಮೃತಪಟ್ಟಿರುವುದು ಅವರ ಕುಟುಂಬಕ್ಕೆ ಕರಾಳ ದಿನವಾಗಿದ್ದು, ಕ್ರೀಡಾ ಕ್ಷೇತ್ರಕ್ಕೆ ಕಪ್ಪು ಚುಕ್ಕೆಯಾಗಿದೆ. ಈ ಕಾರ್ಯಕ್ರಮಕ್ಕೆ ಸ್ವಲ್ಪ ಕಾಲಾವಕಾಶ ಪಡೆದು ಮುಂಜಾಗೃತಾ ಕ್ರಮಗಳನ್ನು ಕೈಗೊಂಡು ಆಯೋಜಿಸಬೇಕಿತ್ತು. ಆತುರದಲ್ಲಿ ಆದ ಸಂಭ್ರಮಾಚರಣೆ ದುರ್ಘಟನೆಗೆ ಕಾರಣವಾಗಿದೆ. ಇದರ ತನಿಖೆ ಮಾಡಿ ಲೋಪದೋಷಗಳನ್ನು ಸರಿಪಡಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದರು.

ಚಿನ್ನಸ್ವಾಮಿ ಕ್ರೀಡಾಂಗಣದ ಸಾಮರ್ಥ್ಯವೇ 35 ಸಾವಿರ. ಆದರೆ ನಿನ್ನೆ ಕ್ರೀಡಾಂಗಣದ ಬಳಿ 2 ಲಕ್ಷ ಜನ ಸೇರಿದ್ದರು. ಹೀಗಾಗಿ ಯಾರ ನಿಯಂತ್ರಣಕ್ಕೂ ಸಿಗಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಎಷ್ಟೇ ಜನ ಪೊಲೀಸರನ್ನು ನಿಯೋಜಿಸಿದರೂ ನಿಯಂತ್ರಣ ಕಷ್ಟ. ಮಾಧ್ಯಮಗಳ ವರದಿ ಪ್ರಕಾರ 4 ರಿಂದ5 ಸಾವಿರ ಪೊಲೀಸರ ನಿಯೋಜನೆ ಮಾಡಲಾಗಿತ್ತು. ಇದು ಆಕಸ್ಮಿಕವಾದ ಘಟನೆ. ಈ ಘಟನೆಯನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ಟೀಕೆ ಮಾಡುತ್ತಿವೆ. ಉತ್ತರ ಪ್ರದೇಶದ ಪ್ರಯಾಗರಾಜ್ ಕಾಲ್ತುಳಿತ ಘಟನೆ ನಡೆದಾಗ ನಾವು ರಾಜಕೀಯ ಮಾಡಲಿಲ್ಲ. ಎಲ್ಲಾ ಮುಂಜಾಗೃತ ಕ್ರಮ ಕೈಗೊಂಡಿದ್ದರೂ ಆದ ದುರ್ಘಟನೆ ನಡೆದಾಗ ಕಾಂಗ್ರೆಸ್ ರಾಜಕೀಯ ಮಾಡಲಿಲ್ಲ. ಈ ದುರಂತದಲ್ಲಿ ಸರ್ಕಾರದ ಪಾಲುದಾರಿಕೆ ಇದ್ದರೆ ಇವರು ಟೀಕೆ ಮಾಡುವುದು ಸರಿ. ಸರ್ಕಾರದ ಪಾಲುದಾರಿಕೆ ಇಲ್ಲದಿರುವಾಗ ಟೀಕೆ ಮಾಡುವುದು ಎಷ್ಟು ಸರಿ? ಸರ್ಕಾರ ಅಭಿಮಾನಿಗಳಿಗೆ ಬರಬೇಡಿ ಎಂದು ಹೇಳಲು ಸಾಧ್ಯವಿಲ್ಲ. ಒಟ್ಟಾರೆ ಈ ದುರ್ಘಟನೆ ಆಗಿದ್ದು, ಇದಕ್ಕೆ ವಿಷಾದ ವ್ಯಕ್ತಪಡಿಸಿ, ಮುಂದೆ ಎಲ್ಲರೂ ಸೇರಿ ಈ ರೀತಿ ನಡೆಯದಂತೆ ಎಚ್ಚರ ವಹಿಸಬೇಕಾಗುತ್ತದೆ. ಅದು ನಮ್ಮ ಕರ್ತವ್ಯ. ರಾಜಕೀಯವನ್ನೇ ಮಾಡುತ್ತೇನೆ ಎನ್ನುವುದಾದರೆ, ದೇಶದಲ್ಲಿ ನಡೆದಿರುವ ಇತರೆ ದುರ್ಘಟನೆಗಳ ಬಗ್ಗೆಯೂ ಚರ್ಚೆ ಮಾಡಬೇಕಾಗುತ್ತದೆ. ದೇಶದ ಪ್ರಧಾನಮಂತ್ರಿಗಳು ಸಂತಾಪ ಸೂಚಿಸಿದ್ದಾರೆ. ಅಭಿಮಾನಿಗಳ ಸಂತೋಷ, ದುಃಖ, ಮೃತರ ಕುಟುಂಬದ ನೋವಿನಲ್ಲಿ ನಾವು ಇರಬೇಕಾಗುತ್ತದೆ ಎಂದು ತಿಳಿಸಿದರು.

ಡಿ.ಕೆ. ಶಿವಕುಮಾರ್ ಅವರ ಪ್ರಚಾರದ ಗೀಳಿಗೆ ಈ ದುರಂತ ಸಂಭವಿಸಿದೆ ಎಂಬ ಕುಮಾರಸ್ವಾಮಿ ಅವರ ಟೀಕೆ ಬಗ್ಗೆ ಕೇಳಿದಾಗ, ಕುಮಾರಸ್ವಾಮಿ ನಾಲಿಗೆ ಸುಳ್ಳು ಹೇಳುವುದರಲ್ಲಿ ಎತ್ತಿದ ಕೈ. ಅವರು ರಾತ್ರಿ ಒಂದು ಹೇಳಿದರೆ, ಬೆಳಗ್ಗೆ ಒಂದು ಹೇಳುತ್ತಾರೆ. ಅವರಿಗೆ ಡಿ.ಕೆ. ಶಿವಕುಮಾರ್ ಬಗ್ಗೆ ಮಾತನಾಡುವ ನೈತಿಕತೆ ಏನಿದೆ? ನೈತಿಕತೆ ಇಲ್ಲದ ವ್ಯಕ್ತಿ ಹೇಳಿಕೆ ಬಗ್ಗೆ ಮಾತನಾಡುವುದು ಅಸಂಬದ್ಧವಾಗಿದೆ. ಕುಮಾರಸ್ವಾಮಿ ಅವರು ಮಾಡಿರುವ ಅನಾಹುತಗಳಿಗೆ ಮೊದಲು ರಾಜೀನಾಮೆ ನೀಡಲಿ, ಆಮೇಲೆ ಬೇರೆಯವರ ರಾಜೀನಾಮೆ ಕೇಳಲಿ. ಮೋದಿ ಅವರು ಮೊದಲು ಕುಮಾರಸ್ವಾಮಿ ಅವರನ್ನು ಸಂಪುಟದಿಂದ ಕೈಬಿಡಲಿ. ನೈತಿಕತೆ, ಪ್ರಾಮಾಣಿಕತೆ ಭಾಷಣ ಮಾಡುವುದಾದರೆ, ಮೊದಲು ಅವರು ರಾಜೀನಾಮೆ ಕೊಟ್ಟು ಮಾತನಾಡಲಿ. ಕೇವಲ ಗೀಳಿಗಾಗಿ ಮಾತನಾಡುವುದಲ್ಲ. ಅವರು ಬೆಂಗಳೂರು ಮುಳುಗಿ ಹೋಯಿತು ಎಂದಿದ್ದರು, ಈಗ ಅವರು ಕೂತ ಮೇಲೆ ದೆಹಲಿ ಮುಳುಗಿತು, ಬಾಂಬೆ ಮುಳುಗಿಲ್ಲವೇ. ರಾಜ್ಯದಲ್ಲಿ ಏನೇ ಆದರೂ ಅದಕ್ಕೆ ಡಿ.ಕೆ. ಶಿವಕುಮಾರ್ ಕಾರಣವೇ? ಬೇರೆಯವರ ಮನೆಯಲ್ಲಿ ಏನಾದರೂ ಶಿವಕುಮಾರ್ ಕಾರಣ ಎಂದು ಹೇಳುವುದರಲ್ಲಿ ಕುಮಾರಸ್ವಾಮಿ ನಿಸ್ಸೀಮರು. ಅವರನ್ನು ಪ್ರಮುಖ ನಾಯಕ ಎಂದು ಪರಿಗಣಿಸಿ, ಅವರ ಹೇಳಿಕೆ ಬಗ್ಗೆ ಚರ್ಚಿಸುವುದೇ ವ್ಯರ್ಥ ಎಂದು ತಿರುಗೇಟು ನೀಡಿದರು.


Share It

You cannot copy content of this page