Law News

ಕರ್ನಾಟಕ ಉಚ್ಚನ್ಯಾಯಾಲಯದ ನ್ಯಾಯಾಧೀಶೆಯಾಗಿ ಅಧಿಕಾರ ಸ್ವೀಕರಿಸಿದ ಪೆರುಗು ಶ್ರೀ ಸುಧಾ

Share It

ಬೆಂಗಳೂರು: ನ್ಯಾಯಾಲಯದ ನಿರೀಕ್ಷೆ ಹಾಗೂ ಆತ್ಮಸಾಕ್ಷಿಗೆ ಅನುಗುಣವಾಗಿ ಕರ್ತವ್ಯ ಪಾಲನೆ ಮಾಡುತ್ತೇನೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಪೆರುಗು ಶ್ರೀ ಸುಧಾ ತಿಳಿಸಿದರು.

ತೆಲಂಗಾಣದಿಂದ ಕರ್ನಾಟಕ ಉಚ್ಚನ್ಯಾಯಾಲಯಕ್ಕೆ ನ್ಯಾಯಾಧೀಶರಾಗಿ ವರ್ಗಾವಣೆಗೊಂಡು ನೇಮಕವಾದ ನಂತರ ಬುಧವಾರ ತಮ್ಮ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡು ಮಾತನಾಡಿದ ಅವರು, ತೆಲಂಗಾಣ ಉಚ್ಚನ್ಯಾಯಾಲಯದಲ್ಲಿ 2021ರಿಂದ ಖಾಯಂ ನ್ಯಾಯಾಧೀಶರಾಗಿ ನೇಮಕಗೊಂಡು ಇದೀಗ ಕರ್ನಾಟಕದಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುವ ಸದಾವಕಾಶ ದೊರೆತಿದೆ. ನ್ಯಾಯಾಲಯದ ಅಪೇಕ್ಷೆಗೆ ತಕ್ಕಂತೆ ಕೆಲಸ ನಿರ್ವಹಿಸುತ್ತೇನೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನೂತನ ನ್ಯಾಯಾಧೀಶರಿಗೆ ಸ್ವಾಗತ ಕೋರಿ ಮಾತನಾಡಿದ ಕರ್ನಾಟಕ ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ಮಿಟ್ಟಲ ಕೋಡ್ ಎಸ್.ಎಸ್, ನ್ಯಾಯಾಧೀಶರಾದ ಪೆರಗು ಶ್ರೀ ಸುಧಾ ಅವರು ಕರ್ನೂಲ್ ಹಾಗೂ ಅದೋನಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು, ಗುಂಟೂರಿನ ಎ.ಸಿ. ಕಾನೂನು ಕಾಲೇಜಿನಲ್ಲಿ ಪದವಿ ಪಡೆದರು. ನಂತರ ಆಂಧ್ರಪ್ರದೇಶದಲ್ಲಿ ವಕೀಲರಾಗಿ ನೋಂದಾಯಿಸಿ ತೆನಾಲಿ, ಶ್ರೀಕಾಳಹಸ್ತಿ ಹಾಗೂ ಕವಾಲಿಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ನಂತರ 2002ರಲ್ಲಿ ಜಿಲ್ಲಾ ನ್ಯಾಯಾಧೀಶರಾಗಿ ನಿಜಾಮಾಬಾದಿನಲ್ಲಿ ಸೇವೆ ಪ್ರಾರಂಭಿಸಿದ್ದಾರೆ. ಬಾಂಬ್ ದಾಳಿ ಪ್ರಕರಣದಲ್ಲಿ ವಿಶೇಷ ನ್ಯಾಯಾಧೀಶರಾಗಿ, ಹೈದರಾಬಾದ್ ಕೌಟುಂಬಿಕ ನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶರಾಗಿ ಸಹ ಸೇವೆ ಸಲ್ಲಿಸಿದ್ದಾರೆ. ವಿಜಯವಾಡದಲ್ಲಿ ಸೆಷನ್ಸ್ ನ್ಯಾಯಾಧೀಶರಾಗಿ, ಕದೀಂನಗರ, ವಿಶಾಖಪಟ್ಟಣ ಹಾಗೂ ನಿಜಾಮಾಬಾದ್‍ನಲ್ಲಿ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿ ನಂತರ ಹೈದರಾಬಾದ್‍ನ ಸಿಟಿ ಸಿವಿಲ್ ಕೋರ್ಟ್‍ನಲ್ಲಿ ಪ್ರಧಾನ ನ್ಯಾಯಾಧೀಶರಾಗಿ ಹಲವು ಪ್ರಕರಣಗಳನ್ನು ಇತ್ಯರ್ಥ ಪಡಿಸಿದ್ದಾರೆ. ತೆಲಂಗಾಣ ಹೈಕೋರ್ಟ್‍ನ ನ್ಯಾಯಾಧೀಶರಾಗಿ 2021ರಿಂದ ನೇಮಕಗೊಂಡು ಇದೀಗ ಕರ್ನಾಟಕ ಉಚ್ಚನ್ಯಾಯಾಲಯದ ನ್ಯಾಯಾಧೀಶರಾಗಿ ವರ್ಗಾವಣೆಗೊಂಡು ನೆಮಕಗೊಂಡಿದ್ದಾರೆ. ಇವರು ಇತರ ನ್ಯಾಯಾಧೀಶರು, ವಕೀಲರು, ನ್ಯಾಯಾಂಗ ಅಧಿಕಾರಿಗಳ ಜೊತೆಗೂಡಿ ಸಮರ್ಥವಾಗಿ ಕೆಲಸ ನಿರ್ವಹಿಸಲಿ ಎಂದು ಶುಭ ಕೋರಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಉಚ್ಚನ್ಯಾಯಾಲಯದ ಹಂಗಾಮಿ ಮುಖ್ಯ ನ್ಯಾಯಾಧೀಶ ವಿ. ಕಾಮೇಶ್ವರ್ ರಾವ್, ಕರ್ನಾಟಕ ಉಚ್ಚನ್ಯಾಯಾಲಯದ ನ್ಯಾಯಾಧೀಶರು, ವಕೀಲರು, ಕರ್ನಾಟಕ ವಕೀಲರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ನ್ಯಾಯಾಂಗ ಅಧಿಕಾರಿಗಳು ಹಾಗೂ ಇನ್ನಿತರರು ಉಪಸ್ಥಿತರಿದ್ದರು.


Share It

You cannot copy content of this page