ಬೆಂಗಳೂರು: ಮಹದೇವಪುರ ವ್ಯಾಪ್ತಿಯಲ್ಲಿ ಅನಧಿಕೃತ ಕಟ್ಟಡ ಹಾಗೂ ನಕ್ಷೆಗೆ ವ್ಯತಿರಿಕ್ತವಾಗಿ ನಿರ್ಮಿಸಿದ ಕಟ್ಟಡಗಳನ್ನು ಗುರುತಿಸಿ, ಸೂಕ್ತ ಪರಿಶೀಲನೆ ನಡೆಸಿ ತ್ವರಿತವಾಗಿ ತೆರವು ಕಾರ್ಯವನ್ನು ನಡೆಸುವಂತೆ ಅಧಿಕಾರಿಗಳಿಗೆ ಪಾಲಿಕೆ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಸೂಚನೆ ನೀಡಿದರು.

ನಲ್ಲೂರುಹಳ್ಳಿ ಮೆಟ್ರೋ ಸ್ಟೇಷನ್ ನಿಂದ ಬೋರ್ವೆಲ್ ರಸ್ತೆ ಮುಖಾಂತರ ವೈಟ್ ಫೀಲ್ಡ್ ಮುಖ್ಯ ರಸ್ತೆವರೆಗೆ ಪರಿಶೀಲನೆ ನಡೆಸಿದ ಮುಖ್ಯ ಆಯುಕ್ತರು ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಅಗತ್ಯ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದು, ನಲ್ಲೂರಹಳ್ಳಿ ಕಾಲೊನಿಯ 3ನೇ ಅಡ್ಡರಸ್ತೆ ಹಾಗೂ 7ನೇ ಅಡ್ಡರಸ್ತೆಯಲ್ಲಿ ನಕ್ಷೆಗೆ ವ್ಯತಿರಿಕ್ತವಾಗಿ ಕಟ್ಟಡಗಳನ್ನು ನಿರ್ಮಿಸಲಾಗಿದ್ದು, ನಿಯಮಾನುಸಾರ ಅನಧಿಕೃತ ಕಟ್ಟಡದ ಭಾಗವನ್ನು ತ್ವರಿತವಾಗಿ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಹೇಳಿದರು.

ಡಾಡ್ಸ್ ವರ್ತ್ ಎನ್‌ಕ್ಲೇವ್ ರೋಡ್ ಬಳಿ ಚರಂಡಿಯ ನೀರು ರಸ್ತೆಗೆ ಬರುತ್ತಿದ್ದು, ಈ ವಿಷಯಕ್ಕೆ ಸಂಬಂಧಿಸಿದಂತೆ ಸೂಕ್ತ ಪರಿಶೀಲನೆ ನಡೆಸಿ ಕಟ್ಟಡದ ಮಾಲೀಕರಿಗೆ ನೋಟಿಸ್ ನೀಡಲು ಹಾಗೂ ಕಟ್ಟಡ ಮಾಲೀಕರಿಗೆ ದಂಡ ವಿಧಿಸಲು ತಿಳಿಸಿದರು. ನಲ್ಲೂರಹಳ್ಳಿ ಮುಖ್ಯ ರಸ್ತೆಯು ಅಧಿಕ ಸಂಚಾರ ದಟ್ಟಣೆಯನ್ನು ಹೊಂದಿದ್ದು, ರಸ್ತೆಯ ಇಕ್ಕೆಲಗಳಲ್ಲಿ ವಾಹನಗಳನ್ನು ನಿಲ್ಲಿಸಿರುವುದು ಕಂಡುಬಂದಿದ್ದು, ಮುಖ್ಯ ಆಯುಕ್ತರು ವಾಹನಗಳ ಮೇಲೆ ದಂಡ ವಿಧಿಸಿ ಸಂಚಾರಿ ಪೊಲೀಸ್ ಮೂಲಕ ವಾಹನಗಳನ್ನು ತೆರವುಗೊಳಿಸಲು ನಿರ್ದೇಶಿಸಿದರು.

ರಾಜಕಾಲುವೆ ಪರಿಶೀಲನೆ:
ನಲ್ಲೂರಹಳ್ಳಿ ರಾಜಕಾಲುವೆ ಪರಿಶೀಲಿಸಿದ ಮುಖ್ಯ ಆಯುಕ್ತರು, ರಾಜಕಾಲುವೆಗೆ ತಡೆಗೋಡೆ ನಿರ್ಮಿಸುವ ಅಗತ್ಯವಿದ್ದು ತ್ವರಿತವಾಗಿ ಸೂಕ್ತ ಕ್ರಮ ಕೈಗೊಂಡು ನಾಲೆಯ ಪಕ್ಕದಲ್ಲಿ ನಿರ್ಮಿಸಿರುವ ಅಕ್ರಮ ಕಟ್ಟಡ ತೆರವುಗೊಳಿಸಿ, ಬಫರ್ ಜೋನ್ ನಲ್ಲಿ ಯಾವುದೇ ಕಟ್ಟಡಗಳ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ನೀಡದಂತೆ ಸೂಚಿಸಿದರು.

ಮುಖ್ಯ ರಸ್ತೆೆ ಅಗಲೀಕರಣಕ್ಕೆೆ ಸೂಚನೆ:
ನಲ್ಲೂರಹಳ್ಳಿ ಮೆಟ್ರೋ ಸ್ಟೇಷನ್ ನಿಂದ ಬೋರ್ವೆಲ್ ರಸ್ತೆ ಮುಖಾಂತರ ವೈಟ್ ಫೀಲ್ಡ್ ಮುಖ್ಯ ರಸ್ತೆಯವರೆಗೆ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ತ್ವರಿತವಾಗಿ ಸಿ.ಡಿ.ಪಿ ಯೋಜನೆಯ ಪ್ರಕಾರ ರಸ್ತೆ ಅಗಲೀಕರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು. 4.5 ಕಿ.ಮೀ. ಪಾದಾಚಾರಿ ಮಾರ್ಗ ಪರಿಶೀಲಿಸಿ ಒತ್ತುವರಿ ಹಾಗೂ ಅನಧಿಕೃತ ಓ.ಎಫ್.ಸಿ ಗಳನ್ನು ತ್ವರಿತವಾಗಿ ತೆರವುಗೊಳಿಸಿ, ರಸ್ತೆ ಪಕ್ಕದ ಚರಂಡಿಗಳ ಹೂಳೆತ್ತಿ, ಮುರಿದುಬಿದ್ದ ಸ್ಲ್ಯಾಬ್ ಗಳನ್ನು ಸರಿಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಈ ವೇಳೆ ವಲಯ ಆಯುಕ್ತ ರಮೇಶ್, ರಸ್ತೆ ಮೂಲಭೂತ ಸೌಕರ್ಯ ವಿಭಾಗದ ಮುಖ್ಯ ಅಭಿಯಂತರ ಲೋಕೇಶ್, ಕಾರ್ಯಪಾಲಕ ಅಭಿಯಂತರರು, ಬೆಸ್ಕಾಂ ಹಾಗೂ ಜಲಮಂಡಳಿಯ ಅಧಿಕಾರಿಗಳು ಇದ್ದರು.