ಬೆಂಗಳೂರು: ಪೂರ್ವ ವಲಯ ವ್ಯಾಪ್ತಿಯಲ್ಲಿ ಹಾಳಾಗಿರುವ ಒಳಚರಂಡಿ ಮೇಲ್ಭಾಗದ ಕವರ್ ಸ್ಲ್ಯಾಬ್ ಬದಲಾಯಿಸಲು ಪೂರ್ವ ವಲಯ ಆಯುಕ್ತ ಸ್ನೇಹಲ್ ಜಲಮಂಡಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪೂರ್ವ ವಲಯ ವ್ಯಾಪ್ತಿಯ ಇಂದಿರಾನಗರದ 12ನೇ ಮುಖ್ಯ ರಸ್ತೆಯಿಂದ ಗಣಪತಿ ಎನ್‌ಕ್ಲೇವ್ ವರೆಗೆ ಪಾದಚಾರಿ ಮಾರ್ಗ ಪರಿಶೀಲನೆ ನಡೆಸುವ ವೇಳೆ ಮಾತನಾಡಿದ ಅವರು, ಮಳೆಗಾಲದ ವೇಳೆ ಒಳಚರಂಡಿಗಳ ಕವರ್ ಸ್ಲ್ಯಾಬ್ ಗಳಿಂದ ನೀರು ಉಕ್ಕಿ ಹರಿಯುತ್ತದೆ. ಆದ್ದರಿಂದ ರಸ್ತೆ ಭಾಗದಲ್ಲಿ ಒಳಚರಂಡಿಗಳ ಮೇಲ್ಭಾಗದಲ್ಲಿ ಅಳವಡಿಸಿರುವ ಕವರ್ ಸ್ಲ್ಯಾಬ್ ಗಳು ದುರಸ್ತಿಯಾಗಿದ್ದಲ್ಲಿ ಅವುಗಳನ್ನು ಕೂಡಲೇ ಬದಲಾಯಿಸಬೇಕು ಎಂದು ಸೂಚಿಸಿದರು.
ಇಂದಿರಾನಗರದ 100 ಅಡಿ ರಸ್ತೆಯ ಪಾದಚಾರಿ ಮಾರ್ಗದಲ್ಲಿ ಹಳೆಯ ಹಾಗೂ ಬಳಕೆಯಲ್ಲಿಲ್ಲದ ವಿದ್ಯುತ್ ಕಂಬಗಳಿದ್ದು, ಅದರಿಂದ ಪಾದಚಾರಿಗಳಿಗೆ ಅಡಚಣೆಯಾಗುತ್ತಿದೆ. ಆದ್ದರಿಂದ ಅವುಗಳನ್ನು ತ್ವರಿತವಾಗಿ ತೆರವುಗೊಳಿಸಬೇಕು ಎಂದರು.
ಕಟ್ಟಡ ಮಾಲೀಕರಿಗೆ ನೋಟಿಸ್:
ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ಪಾದಚಾರಿ ಮಾರ್ಗಗಳಲ್ಲಿ ಕಟ್ಟಡ ನಿರ್ಮಾಣ ಸಾಮಗ್ರಿಗಳು ಹಾಕಿದ್ದು, ಇದರಿಂದ ನಾಗರಿಕರ ಓಡಾಟಕ್ಕೆ ಸಾಕಷ್ಟು ಸಮಸ್ಯೆಯಾಗಲಿದೆ. ಈ ಸಂಬಂಧ ಕಟ್ಟಡ ಮಾಲೀಕರಿಗೆ ನೋಟಿಸ್ ನೀಡಿ, ದಂಡ ವಿಧಿಸಲು ಸೂಚಿಸಿದರು.
ಮೇಲ್ಸೇತುವೆ ಬಳಿ ಸ್ಕೈವಾಕ್ ನಿರ್ಮಿಸಲು ಚಿಂತನೆ:
ಇಂದಿರಾನಗರದಿಂದ ಕೋರಮಂಗಲದ ಕಡೆ ಹೋಗುವ ದೊಮ್ಮಲೂರು ಮೇಲ್ಸೇತುವೆಯ ಮೇಲೆ ಪಾದಚಾರಿ ಮಾರ್ಗವಿಲ್ಲದಿರುವುದನ್ನು ಗಮನಿಸಿ, ಇದರಿಂದ ನಾಗರಿಕರ ಓಡಾಟಕ್ಕೆ ಸಮಸ್ಯೆ ಉಂಟಾಗಿದ್ದು, ದೊಮ್ಮಲೂರು ಮೇಲ್ಸೇತುವೆ ಮೇಲೆ ಪಾದಚಾರಿ ಮಾರ್ಗ ನಿರ್ಮಾಣ ಮಾಡುವುದು ಅಥವಾ ಹಳೆಯ ವಿಮಾನ ನಿಲ್ದಾಣದ ರಸ್ತೆಗೆ ಪಾದಚಾರಿ ಮೇಲ್ಸೇತುವೆ (ಸ್ಕೈವಾಕ್) ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲು ಹೇಳಿದರು.
ರಸ್ತೆ ಗುಂಡಿ ಮುಚ್ಚಲು ಸೂಚನೆ:
ಪಾದಚಾರಿಯನ್ನು ಒತ್ತುವರಿ ಮಾಡಿಕೊಂಡಿರುವುದನ್ನು ಗುರುತಿಸಿ, ಒತ್ತುವರಿ ತೆರವುಗೊಳಿಸಬೇಕು. ರಸ್ತೆಯಲ್ಲಿ ಉಂಟಾಗಿರುವ ರಸ್ತೆ ಗುಂಡಿಗಳಿಂದ ಸಾರ್ವಜನಿಕ ಸಂಚಾರಕ್ಕೆ ಅಡಚಣೆಯಾಗುತ್ತಿದ್ದು, ಕೂಡಲೇ ಎಲ್ಲಾ ಗುಂಡಿಗಳನ್ನು ಮುಚ್ಚಲು ಸೂಚಿಸಿದರು. ರಸ್ತೆಗೆ ಚಾಚಿಕೊಂಡಿರುವ, ಒಣಗಿದ ಅಪಾಯಕಾರಿ ಮರ ಹಾಗೂ ರೆಂಬೆ- ಕೊಂಬೆಗಳನ್ನು ಗುರುತಿಸಿ ಅವುಗಳನ್ನು ಸೂಚಿಸಿದರು.
3 ಕಿ.ಮೀ ಪಾದಚಾರಿ ಮಾರ್ಗ ಪರಿಶೀಲನೆ:
ಪೂರ್ವ ವಲಯ ವ್ಯಾಪ್ತಿಯ ಸೋನಿ ಸಿಗ್ನಲ್‌ನಿಂದ ದೊಮ್ಮಲೂರು ಮೇಲ್ಸೇತುವೆ ಮೂಲಕ ಕೋರಮಂಗಲದ ಗಣಪತಿ ಎನ್‌ಕ್ಲೇವ್ ವರೆಗೆ 3 ಕಿ.ಮೀ ಪಾದಚಾರಿ ಮಾರ್ಗ ಪರಿಶೀಲನೆ ನಡೆಸಿ ಪಾದಚಾರಿ ಮಾರ್ಗದಲ್ಲಿನ ಒತ್ತುವರಿ ತೆರವು ಸೇರಿದಂತೆ ದುರಸ್ತಿಯ ಅಗತ್ಯವಿರುವ ಜಾಗಗಳಲ್ಲಿ ದುರಸ್ತಿ ಕಾರ್ಯ, ಅನಧಿಕೃತ ಕೇಬಲ್ ಗಳ ತೆರವು, ಅನಧಿಕೃತ ಬ್ಯಾನರ್ ಗಳ ತೆರವು, ಮಳೆ ಬಂದಾಗ ರಸ್ತೆಗಳಲ್ಲಿ ನೀರು ನಿಲ್ಲುವ ಜಾಗಗಳಲ್ಲಿ ಸಮಸ್ಯೆಗೆ ಪರಿಹಾರ ಕ್ರಮ ಕೈಗೊಳ್ಳಲು ಹೇಳಿದರು.
ಈ ವೇಳೆ ಜಂಟಿ ಆಯುಕ್ತೆ ಸರೋಜ, ಮುಖ್ಯ ಅಭಿಯಂತರರಾದ ಸುಗುಣ, ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು, ಪೊಲೀಸ್ ಅಧಿಕಾರಿಗಳು, ಪಾಲಿಕೆ, ಬೆಸ್ಕಾಂ, ಜಲಮಂಡಳಿ ಅಧಿಕಾರಿಗಳು, ಸೇನಾಧಿಕಾರಿಗಳು ಸೇರಿದಂತೆ ಇನ್ನಿತರ ಸಿಬ್ಬಂದಿಗಳು ಉಪಸ್ಥಿತರಿದ್ದರು.