News

ಅನಧಿಕೃತ ಕಟ್ಟಡಗಳ ವಿರುದ್ಧ ಕ್ರಮಕ್ಕೆ ಮುಂದಾದ ಬಿಬಿಎಂಪಿ

Share It

ಬೆಂಗಳೂರು: ನಗರದಲ್ಲಿ ನಿಯಮಬಾಹಿರವಾಗಿ ನಿರ್ಮಿಸಲಾಗಿರುವ ಕಟ್ಟಡಗಳ ಬಗ್ಗೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಪ್ರತಿಭಟನೆಗೆ ಸ್ಪಂದಿಸಿರುವ ಬಿಬಿಎಂಪಿ ಅಂತಿಮವಾಗಿ ಅಕ್ರಮ ಕಟ್ಟಡಗಳ ವಿರುದ್ಧ ಕ್ರಮಕ್ಕೆ ಮುಂದಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಅಕ್ರಮ ಕಟ್ಟಡಗಳ ವಿರುದ್ಧ ನಿರ್ಣಾಯಕ ಶಿಸ್ತುಕ್ರಮವನ್ನು ಪ್ರಾರಂಭಿಸಿದ್ದು, ಮುಖ್ಯ ಆಯುಕ್ತರ ಆದೇಶದ ಮೇರೆಗೆ ಯಲಹಂಕ ವಲಯದಲ್ಲಿ 12 ಅನಧಿಕೃತ ಕಟ್ಟಡದ ಫ್ಲೋರ್ ಗಳನ್ನು ಪಾಲಿಕೆಯ ಎಂಜಿನಿಯರ್‌ಗಳು ನೆಲಸಮಗೊಳಿಸಿದ್ದಾರೆ.

ತೆರವು ಕಾರ್ಯಾಚರಣೆಯ ಕುರಿತು ಯಲಹಂಕ ಉಪವಿಭಾಗದ ಕಾರ್ಯಪಾಲಕ ಎಂಜಿನಿಯರ್ ಸುಧಾಕರ್ ಮಾತನಾಡಿ, ಕಟ್ಟಡ ಮಾಲೀಕರು ನೆಲ ಮಹಡಿ ಮತ್ತು ಎರಡು ಹೆಚ್ಚುವರಿ ಮಹಡಿಗಳಿಗೆ ಮಾತ್ರ ಅನುಮತಿ ಪಡೆದಿದ್ದರು. ಆದರೆ ಅನುಮೋದನೆ ಮೀರಿ ಒಂದು ಅಥವಾ ಎರಡು ಹೆಚ್ಚುವರಿ ಮಹಡಿಗಳನ್ನು ಅಕ್ರಮವಾಗಿ ನಿರ್ಮಿಸಿದ್ದಾರೆ. ಮುಖ್ಯ ಆಯುಕ್ತರ ನಿರ್ದೇಶನದಂತೆ ಅನಧಿಕೃತ ಭಾಗವನ್ನು ತೆರವುಗೊಳಿಸಿದ್ದೇವೆ. ಆದರೆ ಕಟ್ಟಡಕ್ಕೆ ಯಾವುದೇ ಹಾನಿಯಾಗದಂತೆ ಪಿಲ್ಲರ್ ಮತ್ತು ಮೇಲ್ಫಾವಣಿಗೆ ಯಾವುದೇ ತೊಂದರೆ ಮಾಡಿಲ್ಲ. ಅನಧಿಕೃತ ಮಹಡಿಗಳನ್ನು ತೆರವುಗೊಳಿಸುವುದಷ್ಟೇ ನಮ್ಮ ಗುರಿಯಾಗಿದೆ. ಸದ್ಯ ಕೆಂಪೇಗೌಡ, ಚೌಡೇಶ್ವರಿ, ಅತ್ತೂರು, ಯಲಹಂಕ ನ್ಯೂ ಟೌನ್ ವಾರ್ಡ್ ಗಳಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದರು.

ಕಾನೂನು ಪ್ರಕಾರ, ಅನಧಿಕೃತ ಭಾಗ ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ. ಆರಂಭದಲ್ಲಿ ಆಸ್ತಿ ಮಾಲೀಕರು ಏಳು ದಿನಗಳೊಳಗೆ ಪರವಾನಗಿಗಳು, ನಕ್ಷೆ ಮತ್ತು ಸಂಬಂಧಿತ ಅನುಮೋದನೆಗಳನ್ನು ಒದಗಿಸುವಂತೆ ಬಿಬಿಎಂಪಿ ಕಾಯ್ದೆ 2020ರ ಸೆಕ್ಷನ್ 313 ರ ಅಡಿಯಲ್ಲಿ ನೋಟಿಸ್ ನೀಡಲಾಗಿತ್ತು. ಇದರ ನಂತರ ಕಟ್ಟಡದ ಬೈಲಾ ಉಲ್ಲಂಘನೆಯನ್ನು ದೃಢೀಕರಿಸುವ ಸೆಕ್ಷನ್ 248(1), 248(2), ಮತ್ತು 248(3) ಅಡಿಯಲ್ಲಿ ನೋಟಿಸ್‌ಗಳನ್ನು ನೀಡಲಾಯಿತು. ಅಂತಿಮವಾಗಿ, ಸೆಕ್ಷನ್ 356 ರ ಅಡಿಯಲ್ಲಿ ಅನಧಿಕೃತ ಭಾಗಗಳನ್ನು ತೆರವುಗೊಳಿಸಲು ಮಾಲೀಕರಿಗೆ ಸೂಚಿಸಲಾಗಿತ್ತಾದರೂ ಕ್ರಮ ಕೈಗೊಳ್ಳದ ಹಿನ್ನಲೆ ಪಾಲಿಕೆಯು ಮಧ್ಯಪ್ರವೇಶಿಸಿದೆ ಎಂದು ಮಾಹಿತಿ ನೀಡಿದರು.


Share It

You cannot copy content of this page