Education News

ಹೊಸ ಖಾಸಗಿ ಅನುದಾನ ರಹಿತ ಶಾಲೆಗಳ ನೋಂದಣಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನ

Share It

ಬೆಂಗಳೂರು: 2025-26ನೇ ಸಾಲಿಗೆ ಹೊಸದಾಗಿ ಖಾಸಗಿ ಅನುದಾನ ರಹಿತ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢಶಾಲೆ ನೋಂದಾಣಿಗೆ ಹಾಗೂ ಉನ್ನತೀಕರಿಸಿದ ತರಗತಿಗಳನ್ನು ಪ್ರಾರಂಭಿಸಲು ಉದ್ದೇಶಿಸಿರುವ ಸಂಸ್ಥೆಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಜೂ.30 ರವರೆಗೆ ಸಮಯಾವಕಾಶ ನೀಡಿ ಶಾಲಾ ಶಿಕ್ಷಣ ಇಲಾಖೆ ಆದೇಶಿಸಿದೆ.

ಈಗಾಗಲೇ 2025-26ನೇ ಶೈಕ್ಷಣಿಕ ಸಾಲಿಗೆ ಶಾಲಾ ನೋಂದಾಣಿ ಮತ್ತು ಉನ್ನತೀಕರಿಸಿದ ತರಗತಿಗಳನ್ನು ಪ್ರಾರಂಭಿಸಲು ಅರ್ಜಿ ಸಲ್ಲಿಸಿ, ತಿರಸ್ಕೃತಗೊಂಡ ಆಡಳಿತ ಮಂಡಳಿಗಳಿಗೆ ಮತ್ತು ಹೊಸದಾಗಿ ಅರ್ಜಿ ಸಲ್ಲಿಸುವ ಆಡಳಿತ ಮಂಡಳಿಗೆಳಿಗೆ ಈ ಅವಕಾಶ ಅನ್ವಯವಾಗಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಆರ್‌ಟಿಇ ಕಾಯ್ದೆಯ ಅಡಿ ಶಾಲೆಗಳು ಪ್ರತಿ ಶೈಕ್ಷಣಿಕ ವರ್ಷದಲ್ಲಿ ಒಂದರಿಂದ ಐದನೇ ತರಗತಿಯವರೆಗೆ ಕನಿಷ್ಠ 200 ಕಾರ್ಯನಿರ್ವಹಣಾ ದಿನಗಳು, 800 ಗಂಟೆಗಳ ಬೋಧನಾ ಅವಧಿ, ಆರರಿಂದ ಎಂಟನೇ ತರಗತಿಯವರೆಗೆ ಕನಿಷ್ಠ 220 ಕಾರ್ಯನಿರ್ವಹಣಾ ದಿನಗಳು, 1000 ಗಂಟೆಗಳ ಬೋಧನಾ ಅವಧಿ ಕಾರ್ಯನಿರ್ವಹಿಸಬೇಕಾಗುತ್ತದೆ. ಈ ಅಂಶವನ್ನು ಗಮನದಲಿಟ್ಟುಕೊಂಡು ಆಡಳಿತ ಮಂಡಳಿಗಳಿಗೆ ಅರ್ಜಿ ಸಲ್ಲಿಸಲು ಅಂತಿಮ ಅವಕಾಶ ನೀಡಲಾಗಿದೆ.

ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಯಾವುದೇ ಕಾರಣಕ್ಕೂ ಕಾಲಾವಕಾಶವನ್ನು ಪುನಃ ವಿಸ್ತರಿಸಲಾಗುವುದಿಲ್ಲ ಎಂದು ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಸ್ಪಷ್ಟಪಡಿಸಿದ್ದಾರೆ. ಯಾವುದೇ ಆಡಳಿತ ಮಂಡಳಿ ಹೊಸ ಶಾಲೆ ಪ್ರಾರಂಭ ಅಥವಾ ಉನ್ನತೀಕರಿಸಿದ ತರಗತಿಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿ, ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆಯದೇ ಹೊಸ ಶಾಲೆ ಅಥವಾ ಉನ್ನತೀಕರಿಸಿದ ತರಗತಿಗಳಿಗೆ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳುವಂತಿಲ್ಲ. ಹಾಗೂ ಅನುಮೋದನೆ, ನೋಂದಣಿ ಪಡೆಯದೆ ವಿದ್ಯಾರ್ಥಿಗಳನ್ನು ದಾಖಲಿಸಕೊಂಡಲ್ಲಿ ಅಂತಹ ಶಾಲೆಗಳನ್ನು ಅನಧಿಕೃತ ಶಾಲೆ ಎಂದು ಪರಿಗಣಿಸಿ ನಿಯಮನುಸಾರ ಕ್ರಮ ವಹಿಸುವುದಾಗಿ ತಿಳಿಸಿದ್ದಾರೆ. ಶಾಲೆಗೆ ನೋಂದಾಣಿ ನೀಡಲು ಆ.20 ರವರೆಗೆ ಉಪನಿರ್ದೇಶಕರಿಗೆ ಸಮಯ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.


Share It

You cannot copy content of this page