ವಿದ್ಯಾರ್ಥಿನಿಯನ್ನು ‘ಐಟಂ’ ಎಂದು ಕರೆದಿದ್ದ 25 ವರ್ಷದ ಉದ್ಯಮಿಗೆ ಮುಂಬೈ ಕೋರ್ಟ್ ಒಂದೂವರೆ ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.
ಮಹಿಳೆಯನ್ನು ‘ಐಟಂ’ ಎಂದು ಕರೆಯುವುದು ಆಕೆಯ ಘನತೆಗೆ ಧಕ್ಕೆ ತರುತ್ತದೆ. ಅಲ್ಲದೇ, ಇಂತಹ ಕುಚೋದ್ಯ ಪದಗಳು ಮಹಿಳೆಯನ್ನು ಕೇವಲ ಭೋಗದ ವಸ್ತುವಾಗಿ ಚಿತ್ರಿಸುತ್ತದೆ. ಈ ಕೃತ್ಯವು ಐಪಿಸಿ ಸೆಕ್ಷನ್ 354ರ ಅಡಿಯಲ್ಲಿ ಅಪರಾಧವಾಗಲಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಅಲ್ಲದೇ, ಆರೋಪಿ ಅಬ್ರಾರ್ ನೂರ್ ಮೊಹಮ್ಮದ್ ಪ್ರಕರಣದಲ್ಲಿ ತನ್ನ ತಪ್ಪಿಲ್ಲ ಎಂಬುದನ್ನು ಸಾಬೀತು ಮಾಡುವಲ್ಲಿ ವಿಫಲನಾಗಿದ್ದಾನೆ. ಇನ್ನು ಪ್ರಾಸಿಕ್ಯೂಷನ್ ಆರೋಪಿಯು ಬಾಲಕಿಗೆ ಕಿರುಕುಳ ನೀಡುವ ಉದ್ದೇಶದಿಂದ ಹಿಂಬಾಲಿಸುತ್ತಿದ್ದ ಎಂಬುದನ್ನು ಸಾಬೀತುಪಡಿಸಿದೆ.
ಇಂತಹ ಪ್ರಕರಣಗಳಲ್ಲಿ ಆರೋಪಿಗೆ ನ್ಯಾಯಾಲಯ ಮೃದು ಧೋರಣೆ ತೋರಿಸಲು ಸಾಧ್ಯವಿಲ್ಲ. ಮುಖ್ಯವಾಗಿ ಹೆಣ್ಣನ್ನು ‘ಐಟಂ’ ಎಂದು ಸಂಭೋದಿಸುವ ರೋಡ್ ರೋಮಿಯೋಗಳಿಗೆ ಪಾಠ ಕಲಿಸುವ ಅಗತ್ಯವಿದೆ.
ಮಹಿಳೆಯರನ್ನು ಇಂತಹ ಕಿರುಕುಳಗಳಿಂದ ರಕ್ಷಿಸಲು ನ್ಯಾಯಾಲಯ ಕಠಿಣವಾಗಿ ನಡೆದುಕೊಳ್ಳಬೇಕಾಗುತ್ತದೆ ಎಂದು ನ್ಯಾಯಾಧೀಶ ಎಸ್.ಜೆ ಅನ್ಸಾರಿ ಅಭಿಪ್ರಾಯಪಟ್ಟಿದ್ದಾರೆ.
ಪ್ರಕರಣದ ಹಿನ್ನೆಲೆ: 2015ರಲ್ಲಿ ಆರೋಪಿ ಅಬ್ರಾರ್ ನೂರ್ ಮೊಹಮ್ಮದ್ ಖಾನ್ ಶಾಲೆಯಿಂದ ಮನೆಗೆ ಹಿಂದಿರುಗುವ ವೇಳೆ ಜಡೆ ಹಿಡಿದು ಎಳೆದು ಕ್ಯಾ ಐಟಂ ಕಿದರ್ ಜಾ ರಹಿ ಹೋ ಎಂದು ಚುಡಾಯಿಸಿದ್ದ. ಈತನ ನಡವಳಿಕೆಗೆ ಆಕ್ಷೇಪಿಸಿದ್ದ ಬಾಲಕಿ ಹಾಗೆ ಕರೆಯಬೇಡ ಎಂದು ತಾಕೀತು ಮಾಡಿದ್ದಳು.
ಬಾಲಕಿ ಪ್ರತಿರೋಧ ತೋರಿದ ವೇಳೆ ಆರೋಪಿ ಆಕೆಗೆ ನಿಂದಿಸಲು ಶುರು ಮಾಡಿದ್ದ. ಈ ವೇಳೆ ಬಾಲಕಿ 100 ಗೆ ಕರೆ ಮಾಡಿ ಪೊಲೀಸರಿಗೆ ತಿಳಿಸಿದ್ದಳು. ಕೂಡಲೇ ಆರೋಪಿ ಸ್ಥಳದಿಂದ ಪರಾರಿಯಾಗಿದ್ದ.
ಘಟನೆ ಸಂಬಂಧ ಪೊಲೀಸರು ಐಪಿಸಿ ಸೆಕ್ಷನ್ 354 ಹಾಗೂ ಪೋಕ್ಸೊ ಕಾಯ್ದೆ ಅಡಿ ಎಫ್ಐಆರ್ ದಾಖಲಿಸಿದ್ದರು. ಪ್ರಕರಣದ ವಿಚಾರಣೆ ವೇಳೆ ಆರೋಪಿ ಈ ಮೊದಲು ಬಾಲಕಿ ನನ್ನ ಸ್ನೇಹಿತೆಯಾಗಿದ್ದಳು. ಇದನ್ನು ಸಹಿಸದ ಅವರ ಪೋಷಕರು ನನ್ನ ವಿರುದ್ಧ ಸುಳ್ಳು ದೂರು ನೀಡಿದ್ದಾರೆ ಎಂದು ವಾದಿಸಿದ್ದ.