ಅಪರೂಪದ ಸಂದರ್ಭದಲ್ಲಿ ಮಾತ್ರವೇ ಮಹಿಳೆಯು ತನ್ನ ಗಂಡನ ಜಾತಿಯ ಸ್ಥಾನಮಾನ ಪಡೆಯುತ್ತಾಳೆ. ವಿವಾಹದ ಬಳಿಕ ಸಾಮಾಜಿಕವಾಗಿ ಅಂಗೀಕರಿಸುವ ಮೂಲಕ ಮಹಿಳೆ ಗಂಡನ ಸಮುದಾಯಕ್ಕೆ ಸೇರುತ್ತಾಳೆ. ಆದರೆ, ಇಂತಹ ತತ್ವವನ್ನು ಚುನಾವಣಾ ವಿಚಾರಗಳಲ್ಲಿ ಪರಿಗಣಿಸಲಾಗದು ಎಂದು ಹೈಕೋರ್ಟ್ ತೀರ್ಪು ನೀಡಿದೆ.
ಗಂಡನ ಜಾತಿಯನ್ನೇ ನನ್ನ ಜಾತಿಯಾಗಿ ಪರಿಗಣಿಸಿಲ್ಲ. ಇದೇ ಕಾರಣಕ್ಕೆ ಚುನಾವಣೆಯಲ್ಲಿ ಗೆದ್ದಿದ್ದರೂ ತನ್ನ ಆಯ್ಕೆಯನ್ನು ಅಸಿಂಧುಗೊಳಿಸಲಾಗಿದೆ ಎಂದು ಆಕ್ಷೇಪಿಸಿ ಶಿವಮೊಗ್ಗದ ಎಂ.ಜಿ ಅರ್ಚನಾ ಎಂಬುವರು ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ಈ ತೀರ್ಪು ಪ್ರಕಟಿಸಿದೆ.
ಪೀಠ ತನ್ನ ತೀರ್ಪಿನಲ್ಲಿ, ಸಾಮಾನ್ಯವಾಗಿ ತಂದೆಯ ಜಾತಿಯು ಮಕ್ಕಳಿಗೆ ಬರುತ್ತದೆ. ಅಪರೂಪದ ಸಂದರ್ಭಗಳಲ್ಲಿ ಪತಿಯ ಜಾತಿಯ ಸ್ಥಾನಮಾನ ವಿವಾಹದ ಬಳಿಕ ಸಾಮಾಜಿಕವಾಗಿ ಅಂಗೀಕರಿಸುವ ಮೂಲಕ ಮಹಿಳೆಗೆ ಬರುತ್ತದೆ. ಆದರೆ, ವಿವಾಹದ ಮೂಲಕ ಪತಿಯ ಸಮುದಾಯಕ್ಕೆ ಸೇರಿದ್ದೇನೆ ಎಂದಾಕ್ಷಣ ಗಂಡನ ಜಾತಿಯು ಪತ್ನಿಗೆ ವರ್ಗಾವಣೆಯಾಗುವುದಿಲ್ಲ. ಅದರಲ್ಲೂ ಚುನಾವಣಾ ವಿಚಾರಗಳಲ್ಲಿ ಇಂತಹ ಅಂಶಗಳನ್ನು ಪರಿಗಣಿಸಲಾಗದು ಎಂದು ಸ್ಪಷ್ಟಪಡಿಸಿದೆ.
ಇನ್ನು, ಜಾತಿ ಪ್ರಮಾಣ ಪತ್ರದ ಲೋಪದ ಕುರಿತಂತೆ ನೀಡಿದ್ದ ದೂರಿನ ವಿಚಾರಣೆ ವೇಳೆ ತನಗೆ ವಾದ ಮಂಡಿಸಲು ಅವಕಾಶ ನೀಡಿಲ್ಲವೆಂದು ಅರ್ಚನಾ ವಾದಿಸಿದ್ದಾರೆ. ಆದರೆ, ಹಲವು ಅವಕಾಶ ನೀಡಿದ್ದರೂ ಅವರು ವಿಚಾರಣೆಗೆ ಹಾಜರಾಗಿಲ್ಲ ಎಂಬುದು ದಾಖಲೆಗಳಿಂದ ಸ್ಪಷ್ಟವಾಗುತ್ತದೆ. ಈ ವಿಚಾರದಲ್ಲಿ ನ್ಯಾಯಾಲಯ ಉದಾರತೆ ತೋರಲು ಅರ್ಚನಾ ಕೂಲಿ ಕಾರ್ಮಿಕ ಮಹಿಳೆಯಲ್ಲ. ಬದಲಿಗೆ ಜನಪ್ರತಿನಿಧಿ. ಹೀಗಾಗಿ ಅವರ ಆಯ್ಕೆಯನ್ನು ಜಾತಿ ಪ್ರಮಾಣ ಪತ್ರದ ಲೋಪದ ಕಾರಣಕ್ಕಾಗಿ ಅಸಿಂಧುಗೊಳಿಸಿರುವ ಆದೇಶದಲ್ಲಿ ಮಧ್ಯಪ್ರವೇಶಿಸುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಪ್ರಕರಣದ ಹಿನ್ನೆಲೆ: ಹುಟ್ಟಿನಿಂದ ಪರಿಶಿಷ್ಟ ಜಾತಿಗೆ ಸೇರಿರುವ ಎಂಜಿ ಅರ್ಚನಾ ಕಳೆದ ವರ್ಷ ನಡೆದಿದ್ದ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಆ ಬಳಿಕ ಇವರ ಆಯ್ಕೆ ಅಸಿಂಧುಗೊಳಿಸುವಂತೆ ಕೋರಿ ಅಭಿಲಾಷ ಎಂಬುವರು ಪ್ರಕರಣ ದಾಖಲಿಸಿದ್ದರು. ಪರಿಶಿಷ್ಟ ಪಂಗಡಕ್ಕೆ ಮೀಸಲಿದ್ದ ಹುದ್ದೆಗೆ ಪರಿಶಿಷ್ಟ ಜಾತಿಗೆ ಸೇರಿದ ಅರ್ಚನಾ ಸ್ಪರ್ಧಿಸಿದ್ದು ನಿಯಮಬಾಹಿರ ಎಂದಿದ್ದರು. ಅರ್ಜಿ ಪುರಸ್ಕರಿಸಿದ್ದ ಶಿವಮೊಗ್ಗದ 2ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಲಯ ಅರ್ಚನಾ ಆಯ್ಕೆ ಅನೂರ್ಜಿತಗೊಳಿಸಿ 2022ರ ಫೆ.1ರಂದು ಆದೇಶಿಸಿತ್ತು.
ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಅರ್ಚನಾ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿಯಲ್ಲಿ, ತಾನು ಪರಿಶಿಷ್ಟ ಪಂಗಡಕ್ಕೆ ಸೇರಿದ ವ್ಯಕ್ತಿಯನ್ನು ವಿವಾಹವಾಗಿದ್ದೇನೆ. ಎಸ್ಟಿ ಸಮುದಾಯದ ವ್ಯಕ್ತಿ ಮದುವೆಯಾಗಿರುವುದರಿಂದ ಪತಿಯ ಸಾಮಾಜಿಕ ಸ್ಥಾನಮಾನವನ್ನು ಹೊಂದಿದ್ದೇನೆ. ಇದರಿಂದಾಗಿ ಪತಿಯ ಜಾತಿ ತನಗೂ ಅನ್ವಯಿಸುತ್ತದೆ ಎಂದು ವಾದಿಸಿದ್ದರು.
(WP 3399/2022)