Health News

ಸರ್ಕಾರಿ ಆಸ್ಪತ್ರೆಗಳಲ್ಲಿ ಯೋಗ ಮಂದಿರಗಳ ಸ್ಥಾಪನೆ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

Share It

ಬೆಂಗಳೂರು: ರಾಜ್ಯದಲ್ಲಿ ಹೆಚ್ಚಿನ ಜನರಿಗೆ ಯೋಗ ಪರಿಚಯಿಸುವ ನಿಟ್ಟಿನಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಯೋಗ ಮಂದಿರಗಳನ್ನು ಸ್ಥಾಪಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಘೋಷಿಸಿದರು.

ವಿಧಾನಸೌಧದಲ್ಲಿ ಶನಿವಾರ 11 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಿಶ್ವ ಮಟ್ಟದಲ್ಲಿ ಮನ್ನಣೆ ಪಡೆದಿರುವ ಯೋಗವನ್ನು ಹೆಚ್ಚಿನ ಜನರಿಗೆ ಪರಿಚಯಿಸಬೇಕಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಿದೆ. ರಾಜ್ಯದ ಎಲ್ಲ ಜಿಲ್ಲಾಸ್ಪತ್ರೆಗಳು, ತಾಲೂಕು ಆಸ್ಪತ್ರೆಗಳು ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಯೋಗ ಪರಿಚಯಿಸುವ ‘ಯೋಗ ಮಂದಿರ’ಗಳನ್ನು ಪ್ರಾರಂಭಿಸಲಾಗುವುದು ಎಂದು ಹೇಳಿದರು.

ಮೈಸೂರು ಜಿಲ್ಲೆಯನ್ನು ಯೋಗ ಜಿಲ್ಲೆಯನ್ನಾಗಿ ನಿರ್ಮಿಸುವತ್ತ ಈಗಾಗಲೇ ಯೋಜನೆ ರೂಪಿಸಲಾಗಿದೆ.‌ ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮೈಸೂರು ಜಿಲ್ಲೆಯ ಪ್ರತಿ ಮನೆಗಳಲ್ಲಿ ಒಬ್ಬರಾದರೂ ಯೋಗಭ್ಯಾಸ ನಡೆಸುವ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸಲು ಗುರಿ ಹೊಂದಲಾಗಿದೆ. ದೇಶದಲ್ಲಿಯೇ ಪ್ರಥಮ ಬಾರಿಗೆ ರಾಜ್ಯದಲ್ಲಿ ಒಂದು ಜಿಲ್ಲೆಯನ್ನು ಸಂಪೂರ್ಣವಾಗಿ ಯೋಗ ಜಿಲ್ಲೆಯನ್ನಾಗಿ ರೂಪಿಸುವತ್ತ ಹೆಜ್ಜೆ ಇಟ್ಟಿದ್ದೇವೆ. ರಾಜ್ಯದಲ್ಲಿ ಪರಂಪರಾಗತವಾಗಿ ಬಂದ ಅಷ್ಟಾಂಗ ಯೋಗಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.

ಆಯುಷ್ ಇಲಾಖೆಯಿಂದ ಯಶಸ್ವಿಯಾಗಿ 11 ನೇ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಗಿದೆ. ರಾಜ್ಯದ 10 ಸಾವಿರ ಸ್ಥಳಗಳಲ್ಲಿ 5 ಲಕ್ಷಕ್ಕೂ ಹೆಚ್ಚು ಜನರಿಗೆ ಯೋಗಭ್ಯಾಸ ಮಾಡಲು ಸರ್ಕಾರ ಅನುವು ಮಾಡಿಕೊಟ್ಟಿದೆ. 45 ನಿಮಿಷಗಳ ಯೋಗ ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಲಾಗುತ್ತಿದೆ. ಹಲವೆಡೆ ಯೋಗ ದಿನಾಚರಣೆಯ ಪ್ರಯುಕ್ತ ಯೋಗ ಪಾರ್ಕ್, ಯೋಗ ಧನುಷ್, ಹಸಿರು ಯೋಗ, ಯೋಗ ಮಹಾಕುಂಭ, ಯೋಗ ಸಂಯೋಗ, ಯೋಗ ಅನ್ ಪ್ಲಗ್ಸ್ ನಂತಹ ಕಾರ್ಯಕ್ರಮಗಳನ್ನು ಆಯುಷ್ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಹಸಿರು ಯೋಗ ಕಾರ್ಯಕ್ರಮದ ಅಡಿಯಲ್ಲಿ 1 ಲಕ್ಷ ಗಿಡಗಳನ್ನು ನೆಡಲಾಗುವುದು. ಅಲ್ಲದೇ ಯೋಗ ಧನಷ್ ಎಂಬ ಕಾರ್ಯಕ್ರಮದ ಮೂಲಕ ರಾಜ್ಯದಾದ್ಯಂತ 5 ಲಕ್ಷ ಜನರಿಗೆ ಯೋಗ ಪ್ರೋಟೋಕಾಲ್ ಅನ್ನು ಹೇಳಿಕೊಡಲಾಗಿದ್ದು, ಕಾರ್ಯಕ್ರಮದ ಅಡಿಯಲ್ಲಿ 5000 ಶಾಲೆಗಳಲ್ಲಿ ಪ್ರೋಟೋಕಾಲ್ ಅನ್ನು ಮಾಡಲು ಕ್ರಮಕೈಗೊಳ್ಳಲಾಗಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.‌

ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋಗ ಎಂಬ ಘೋಷವಾಕ್ಯದೊಂದಿಗೆ ಈ ಬಾರಿಯ ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ನೆಡೆದ ಕಾರ್ಯಕ್ರಮದಲ್ಲಿ ವಿಧಾನ ಸೌಧದ ಮೆಟ್ಟಿಲುಗಳ ಎದುರು 5 ಸಾವಿರಕ್ಕೂ ಹೆಚ್ಚು ಜನರು ಯೋಗಾಭ್ಯಾಸ ನಡೆಸಿದರು.‌ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಸಭಾಪತಿ ಬಸವರಾಜ್ ಹೊರಟ್ಟಿ ಯೋಗಾಭ್ಯಾಸ ನಡೆಸಿದರು.


Share It

You cannot copy content of this page