News

ವೀರಶೈವ ಧರ್ಮ ಸಿಂಧೂ ಸಂಸ್ಕೃತಿಯ ಹಿನ್ನೆಲೆ ಹೊಂದಿದೆ: ಶಾಸನ ತಜ್ಞ ಡಾ. ಎಂ.ಜಿ.ನಾಗರಾಜ್

Share It

ಬೆಂಗಳೂರು: ವೀರಶೈವ ಪರಂಪರೆ ಭಾರತೀಯ ಸಾಂಸ್ಕೃತಿಕ ಇತಿಹಾಸದಲ್ಲಿ ಒಂದು ಜನಪರ ಪರಂಪರೆಯಾಗಿ ಪ್ರಸಿದ್ಧವಾಗಿದೆ. ಭಾರತೀಯ ವರ್ಣವ್ಯವಸ್ಥೆ ಇಂತಹ ಪರಂಪರೆಯ ಮೇಲೆ ಅವಲಂಬಿಗೊಂಡು ಹೆಚ್ಚು ವೈಜ್ಞಾನಿಕವಾಗಿದೆ. ಆದ್ದರಿಂದ ಸಿಂಧೂ ಸಂಸ್ಕೃತಿಯನ್ನು ಹಿಂದೂ ಸಂಸ್ಕೃತಿಯಾಗಿ ಮತ್ತು ಸಿಂಧೂ ಸಂಸ್ಕೃತಿಯನ್ನು ವೀರಶೈವ ಸಂಸ್ಕೃತಿಯಾಗಿ ಭಾರತೀಯ ಸಾಮಾಜಿಕ ಇತಿಹಾಸದಲ್ಲಿ ಪರಿಗಣಿಸಬೇಕು ಎಂದು ಖ್ಯಾತ ಶಾಸನ ತಜ್ಞ ಡಾ. ಎಂ.ಜಿ.ನಾಗರಾಜ್ ಹೇಳಿದರು.

ದಿ ಮಿಥಿಕ್ ಸೊಸೈಟಿ ಆಯೋಜಿಸಿದ್ದ ಬಿ.ಎಸ್. ರಾಮನಾಥ ದತ್ತಿ ಪ್ರಪ್ರಥಮ ಉಪನ್ಯಾಸ ʼವೀರಶೈವ ಸಿದ್ಧಾಂತದಲ್ಲಿ ಗೋತ್ರ ಪುರುಷರ ಕಲ್ಪನೆʼ ಎಂಬ ವಿಷಯ ಕುರಿತು ಮಾತನಾಡಿದ ಅವರು, ಶಿವನ ಸ್ವರೂಪವನ್ನು ನೀಡಿದ್ದು ನಮ್ಮ ಅತಿ ಪ್ರಾಚೀನವಾದ ಸಿಂಧೂ ಸಂಸ್ಕೃತಿಯಾಗಿದೆ. ಹರಪ್ಪದಲ್ಲಿ ದೊರೆತಿರುವ ಮಣ್ಣಿನ ಮುದ್ರಿಕೆಗಳ ಮೇಲೆ ಕಂಡುಬರುವ ಪಶುಪತಿಯ ಚಿತ್ರ ಇದಕ್ಕೆ ಆಧಾರವಾಗಿದೆ. ರುದ್ರ-ವೀರಭದ್ರ ಆರಾಧನೆ ವೀರಶೈವ ಧಾರ್ಮಿಕ ಪರಂಪರೆಯ ವಿಶೇಷತೆಯಾಗಿದ್ದು, ಇನ್ನು ಪ್ರಾಚೀನ ಭಾರತದ ಸಂಸ್ಕೃತಿಗೆ ಸಂಬಂಧಿಸಿದಂತೆ ಬ್ರಹ್ಮಸೃಷ್ಠಿ, ಋಷಿಸೃಷ್ಠಿ ಮತ್ತು ಶಿವನಸೃಷ್ಠಿಯನ್ನು ಗಮನಿಸಿದರೆ ಶಿವನಸೃಷ್ಠಿಯಲ್ಲಿ ವೀರಶೈವರು ಕಂಡುಬರುತ್ತಾರೆ ಎಂದರು.

ಹರಿಹರಸಾಮರಸ್ಯ ಭಾರತೀಯತೆಯ ವಿಶೇಷತೆ. ಭಾರತೀಯ ಋಷಿ ಪರಂಪರೆ, ಆಚರಣೆಗಳು, ಪದ್ಧತಿಗಳು ವಿಶೇಷವಾಗಿ ಪೂಜಾ ಪದ್ಧತಿಯನ್ನು ಗಮನಿಸಿದರೆ ವೀರಶೈವ ಪರಂಪರೆಯಲ್ಲಿ ವೀರಭದ್ರನ ಆರಾಧನೆ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ವೀರಶೈವ ಧರ್ಮ ಪ್ರಣೀತವಾದ ಗೋತ್ರಗಳ ಪರಂಪರೆಯನ್ನು ಗಮನಿಸಿದರೆ ಅವು ಗುರುಪರಂಪರೆಯಿಂದ ಹುಟ್ಟಿದ ಗೋತ್ರಗಳು ಮತ್ತು ವೀರಭಧ್ರ ಪ್ರಣೀತವಾದ ಸಂಸ್ಕೃತಿಯನ್ನು ಸೂಚಿಸುತ್ತವೆ. ವೀರಶೈವ ಪರಂಪರೆಗೆ ಸಂಬಂಧಿಸಿದ ಶಿವಪೀಠಗಳಾದ ಉಜ್ಜಯಿನಿ ಮುಂತಾದವು ತಮ್ಮದೇ ಆದ ಪರಂಪರೆ ಮತ್ತು ಐತಿಹಾಸಿಕ ದಾಖಲೆಗಳನ್ನು ಹೊಂದಿವೆ ಎಂದರು.

ಉಪನ್ಯಾಸದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಇತಿಹಾಸ ಪ್ರಾಧ್ಯಾಪಕರು ಮತ್ತು ನಿಕಟಪೂರ್ವ ಕುಲಸಚಿವೆ ಪ್ರೊ. ವಿ. ಅನುರಾಧ ಅವರು, ಶೈವಾಗಮಗಳ ಪರಂಪರೆ ಭಾರತದ ಆಚೆಗೂ ನೆರೆ ರಾಷ್ಟ್ರಗಳಾದ ಶ್ರೀಲಂಕ, ಆಗ್ನೇಯ ಏಷ್ಯಾಗಳಲ್ಲಿಯೂ ಕಂಡುಬರುತ್ತದೆ. ಅಲ್ಲಿ ಇಂದು ಪ್ರಸ್ತುತವಿರುವ ಆಚರಣೆಗಳನ್ನು ತುಲನಾತ್ಮಕವಾಗಿ ಅಧ್ಯಯನ ಮಾಡಿದಾಗ ಹೆಚ್ಚಿನ ಐತಿಹಾಸಿಕ ವಿಷಯಗಳನ್ನು ತಿಳಿದುಕೊಳ್ಳುವುದು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ದಿ ಮಿಥಿಕ್ ಸೊಸೈಟಿ ಅಧ್ಯಕ್ಷ ವಿ. ನಾಗರಾಜ್ ಸ್ವಾಗತಿಸಿ ದತ್ತಿಯ ವಿವರಗಳನ್ನು ನೀಡಿದರು. ದಿ ಮಿಥಿಕ್ ಸೊಸೈಟಿಯ ಆಡಳಿತ ಮಂಡಳಿಯ ಸದಸ್ಯ ಪ್ರೊ. ಎಂ.ಜಿ. ಚಂದ್ರಕಾಂತ್ ಪ್ರಾರ್ಥನೆ ಮಾಡಿದರು. ಮತ್ತೊಬ್ಬ ಆಡಳಿತ ಮಂಡಳಿಯ ಸದಸ್ಯ ಎಂ.ಆರ್. ಪ್ರಸನ್ನ ಕುಮಾರ್ ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆ ಮಾಡಿದರು. ದತ್ತಿ ನೀಡಿದ ಬಿ.ಎಸ್. ರಾಮನಾಥ, ಪ್ರೊ. ಶ್ಯಾಮಲ ರತ್ನ ಕುಮಾರಿ, ದಿ ಮಿಥಿಕ್ ಸೊಸೈಟಿ ಗೌರವ ಕಾರ್ಯದರ್ಶಿ ಡಾ. ಎಸ್. ರವಿ ಮತ್ತು ಅನೇಕ ಪ್ರಾಧ್ಯಾಪಕರು, ವಿದ್ವಾಂಸರು ಉಪಸ್ಥಿತರಿದ್ದರು.


Share It

You cannot copy content of this page