ಹೆಲ್ತ್ ಇನ್ಶ್ಯೂರೆನ್ಸ್ ಮಾಡಿಸುವ ವೇಳೆ ಅನಾರೋಗ್ಯದ ಕುರಿತಂತೆ ಮಾಹಿತಿ ನೀಡದೇ ವಿಮೆ ಪಡೆದಿದ್ದರೆ ವಿಮಾ ಸಂಸ್ಥೆ ಮೆಡಿಕ್ಲೈಮ್ ನಿರಾಕರಿಸಬಹುದು ಎಂದು ಹೈಕೋರ್ಟ್ ತೀರ್ಪು ನೀಡಿದೆ.
ವಿಮಾ ಸಂಸ್ಥೆ ಆರೋಗ್ಯ ವಿಮೆ ಪಾಲಿಸಿ ನೀಡುವ ವೇಳೆ ಅದನ್ನು ಪಡೆಯುವವರು ತಮ್ಮ ಆರೋಗ್ಯದ ಕುರಿತು ಮಾಹಿತಿ ನೀಡಬೇಕು. ಮಾಹಿತಿ ಮುಚ್ಚಿಟ್ಟು ನಂತರ ವಿಮಾ ಸಂಸ್ಥೆ ಕ್ಲೇಮು ನಿರಾಕರಿಸಿದಾಗ ಅದರಲ್ಲಿ ದೋಷ ಹುಡುಕಲು ಸಾಧ್ಯವಿಲ್ಲ ಎಂದು ನ್ಯಾ. ಎಂ ನಾಗಪ್ರಸನ್ನ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ.
ಪ್ರಕರಣದ ಹಿನ್ನೆಲೆ: ಬೆಂಗಳೂರಿನ ದಂಪತಿ 2017ರ ಏಪ್ರಿಲ್ 29ರಂದು ಅನಾರೋಗ್ಯಕ್ಕೆ ವಿಮೆ ಸೌಲಭ್ಯ ಒದಗಿಸುವ ಹೋಮ್ ಸುರಕ್ಷಾ ಪ್ಲಸ್ ಪಾಲಿಸಿ ಪಡೆದಿದ್ದರು. 2020ರ ಆಗಸ್ಟ್ 10ರಂದು ವಿಕ್ರಮ್ ಆಸ್ಪತ್ರೆಯ ವೈದ್ಯರ ಬಳಿ ಮಲ್ಟಿಪಲ್ ಸ್ಕ್ಲೇರೊಸಿಸ್ ಗೆ ಚಿಕಿತ್ಸೆ ಪಡೆದಿದ್ದರು. ಬಳಿಕ ಚಿಕಿತ್ಸೆ ವೆಚ್ಚದ ಮರುಪಾವತಿ ಕೋರಿದ್ದರು.
ವಿಮಾ ಸಂಸ್ಥೆ ಅರ್ಜಿದಾರರ ಆರೋಗ್ಯದ ಹಿನ್ನೆಲೆ ಪರಿಶೀಲಿಸಿದ ವೇಳೆ ಅವರಿಗೆ ಮೊದಲೇ ಅನಾರೋಗ್ಯ ಸಮಸ್ಯೆ ಇದ್ದುದು ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಚಿಕಿತ್ಸಾ ವೆಚ್ಚ ನೀಡಲು ನಿರಾಕರಿಸಿತ್ತು. ವಿಮಾ ಸಂಸ್ಥೆಯ ಕ್ರಮ ಪ್ರಶ್ನಿಸಿ ದಂಪತಿ ವಿಮಾ ಒಂಬುಡ್ಸ್ ಮನ್ ಗೆ ದೂರು ನೀಡಿದ್ದರು. ಅಲ್ಲದೇ ಚಿಕಿತ್ಸಾ ವೆಚ್ಚ 28.43 ಲಕ್ಷ ಕೊಡಿಸುವಂತೆ ಕೋರಿದ್ದರು.
ದಾಖಲೆಗಳನ್ನು ಪರಿಶೀಲಿಸಿದ ವಿಮಾ ಒಂಬುಡ್ಸ್ ಮನ್ ದಂಪತಿಯ ಮನವಿಯನ್ನು ಪರಿಗಣಿಸಲು ನಿರಾಕರಿದ್ದರು. ಈ ಹಿನ್ನೆಲೆಯಲ್ಲಿ ಅರ್ಜಿದಾರ ದಂಪತಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ, ಮೆಡಿಕ್ಲೈಮ್ ಪಾಲಿಸಿಯು ಒಂದು ಒಪ್ಪಂದವಾಗಿದೆ. ಅದರಂತೆ ವಿಮೆ ಪಡೆಯುವವರು ಪಾಲಿಸಿ ಪಡೆಯುವ ಮುನ್ನ ತಮ್ಮ ಆರೋಗ್ಯದ ಮಾಹಿತಿಯನ್ನು ನೀಡಬೇಕು.
ಒಂದು ವೇಳೆ ವಿಮೆ ಪಡೆದ ನಂತರ ಅನಾರೋಗ್ಯದ ಕುರಿತಂತೆ ಮಾಹಿತಿ ಲಭ್ಯವಾದಾಗ ಸಂಸ್ಥೆ ವಿಮಾ ಸೌಲಭ್ಯ ನಿರಾಕರಿಸಿದರೆ ಅದರಲ್ಲಿ ತಪ್ಪು ಹುಡುಕಲು ಸಾಧ್ಯವಾಗದು ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೇ, ಅರ್ಜಿದಾರರ ಮನವಿಯನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ತಿಳಿಸಿ ಅರ್ಜಿಯನ್ನು ವಜಾಗೊಳಿಸಿದೆ.
(WRIT PETITION No.14346 OF 2021)