ಲೇಖನ: ಮಂಜೇಗೌಡ ಕೆ.ಜಿ, ವಕೀಲರು, ಎಂಜಿ ಲೀಗಲ್, ಬೆಂಗಳೂರು.
ವೇಶ್ಯಾವಾಟಿಕೆ ಗೃಹದ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಸಿಕ್ಕಿ ಬಿದ್ದ ಗ್ರಾಹಕನ ವಿರುದ್ಧ ಯಾವುದೇ ರೀತಿಯ ಕಾನೂನು ಕ್ರಮ ಜರುಗಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.
ತಮ್ಮ ವಿರುದ್ಧ ಪೊಲೀಸರು ದಾಖಲಿಸಿರುವ ಪ್ರಕರಣ ರದ್ದುಪಡಿಸುವಂತೆ ಕೋರಿ ಬೆಂಗಳೂರಿನ ಎಸ್. ಬಾಬು ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ಈ ತೀರ್ಪು ನೀಡಿದೆ.
ಪೀಠ ತನ್ನ ತೀರ್ಪಿನಲ್ಲಿ, ಪೊಲೀಸರು ಶೋಧ ನಡೆಸಿದಾಗ ಅರ್ಜಿದಾರರು ವೇಶ್ಯಾವಾಟಿಕೆ ಗೃಹದಲ್ಲಿದ್ದರು ಎಂಬುದರಲ್ಲಿ ವಿವಾದವಿಲ್ಲ. ಆದರೆ, ಅವರು ಗ್ರಾಹಕರೆಂಬ ಕಾರಣಕ್ಕೆ ಕ್ರಿಮಿನಲ್ ಮೊಕದ್ದಮೆಗೆ ಎಳೆಯಲಾಗದು. ಇನ್ನು ಪೊಲೀಸರು ದಾಖಲಿಸಿರುವ, ಮಾನವ ಕಳ್ಳಸಾಗಣೆ ಕಾಯ್ದೆಯ ಸೆಕ್ಷನ್ 3ರ ಪ್ರಕಾರ ವೇಶ್ಯಾಗೃಹ ನಡೆಸುವುದಕ್ಕೆ ಅಥವಾ ಜಾಗವನ್ನು ವೇಶ್ಯಾಗೃಹಕ್ಕೆ ಬಳಸಲು ಅನುಮತಿಸುವುದಕ್ಕೆ ಶಿಕ್ಷೆ ವಿಧಿಸಬಹುದು, ಸೆಕ್ಷನ್ 4 ವೇಶ್ಯಾವಾಟಿಕೆಯಿಂದ ಹಣ ಗಳಿಸಿ ಜೀವನ ಸಾಗಿಸುವವರಿಗೆ ಶಿಕ್ಷೆ ನೀಡುತ್ತದೆ.
ಸೆಕ್ಷನ್ 5ರ ಪ್ರಕಾರ ವೇಶ್ಯಾವಾಟಿಕೆಗಾಗಿ ವ್ಯಕ್ತಿ ಸಾಗಿಸುವುದು, ಪ್ರಚೋದಿಸುವುದು ಅಥವಾ ಕರೆದೊಯ್ಯುವುದಕ್ಕೆ ಶಿಕ್ಷೆ ವಿಧಿಸಬಹುದು. ಸೆಕ್ಷನ್ 6 ರಂತೆ ವೇಶ್ಯಾವಾಟಿಕೆ ನಡೆಸುತ್ತಿರುವ ಸ್ಥಳದಲ್ಲಿ ಯಾವುದೇ ವ್ಯಕ್ತಿಯನ್ನು ಬಂಧಿಸಿಟ್ಟರೆ ಶಿಕ್ಷಿಸಬಹುದು. ಆದರೆ, ಅರ್ಜಿದಾರರು ಯಾವ ಅಪರಾಧದಲ್ಲಿ ಭಾಗಿಯಾಗಿದ್ದರು ಎಂಬುದನ್ನು ದೂರಿನಲ್ಲಿ ತಿಳಿಸಿಲ್ಲ. ಹೀಗಾಗಿ, ಅವರ ವಿರುದ್ಧದ ಪ್ರಕರಣ ಊರ್ಜಿತವಲ್ಲ ಎಂದು ಪೀಠ ಹೇಳಿದೆ.
ಪ್ರಕರಣದ ಹಿನ್ನೆಲೆ: 2021ರ ಸೆಪ್ಟೆಂಬರ್ 23ರಂದು ಕೆಂಗೇರಿ ಠಾಣೆ ಪೊಲೀಸರು ತಮಗೆ ಬಂದ ಖಚಿತ ಮಾಹಿತಿ ಆಧರಿಸಿ ವೇಶ್ಯಾವಾಟಿಕೆ ಗೃಹದ ಮೇಲೆ ದಾಳಿ ನಡೆಸಿ ಕೆಲವು ವ್ಯಕ್ತಿಗಳನ್ನು ವಶಕ್ಕೆ ಪಡೆದಿದ್ದರು. ಈ ವೇಳೆ ಸಿಕ್ಕಿಬಿದ್ದ ಅರ್ಜಿದಾರರ ವಿರುದ್ಧವೂ ಮಾನವ ಕಳ್ಳಸಾಗಣೆ ತಡೆ ಕಾಯ್ದೆ-1956ರ ಸೆಕ್ಷನ್ 3, 4, 5, 6 ಮತ್ತು ಐಪಿಸಿ ಸೆಕ್ಷನ್ 370 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣ ರದ್ದು ಕೋರಿ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು.
(CRL.P 2119/2022)
