ಬೆಂಗಳೂರು: ಮಕ್ಕಳಿಗೆ ತುರ್ತು ಸೇವೆಯನ್ನು ಒದಗಿಸುವ, ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಉಚಿತ ಮಕ್ಕಳ ಸಹಾಯವಾಣಿ ಸಂಖ್ಯೆಯಾದ 1098 ಅನ್ನು ಎಲ್ಲ ಸರ್ಕಾರಿ ಶಾಲೆಗಳು, ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಸೂಕ್ತ ಸ್ಥಳದ ಮೇಲೆ ಗೋಡೆ ಬರಹ ಬರೆಸಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಆಯುಕ್ತ ಡಾ. ಕೆ. ವಿ. ತ್ರಿಲೋಕಚಂದ್ರ ತಿಳಿಸಿದ್ದಾರೆ.
ಸೋಮವಾರ ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಎಲ್ಲ ಶಾಲೆಗಳಲ್ಲಿ ಸಹಾಯವಾಣಿ ಸಂಖ್ಯೆಯ ಬಗ್ಗೆ ಮಾಹಿತಿ ಪ್ರಕಟಿಸಬೇಕು. ಬೆಳಗ್ಗೆ ಶಾಲಾ ಅಸೆಂಬ್ಲಿ ಪ್ರಾರ್ಥನೆ ಸಮಯದಲ್ಲಿ ಮಕ್ಕಳಿಗೆ ತಿಳಿಸಬೇಕು. ಮಕ್ಕಳಿಗಾಗಿ ಸಿದ್ದಪಡಿಸುವ ಎಲ್ಲ ಪುಸ್ತಕ ಮತ್ತು ನೋಟ್ ಪುಸ್ತಕಗಳ ಮೇಲೆ ಹಾಗೂ ಎಲ್ಲ ಪುಟಗಳಲ್ಲಿ ಲೇಬಲ್ ಹಾಕಿ ಸಂಖ್ಯೆ ಸೀಲ್ ಹಾಕಬೇಕು ಎಂದು ಆಯುಕ್ತರು ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಿದ್ದಾರೆ.
ಮಕ್ಕಳ ಘನತೆಯ ಬದುಕಿನ ನಿರ್ಮಾಣ ಮಾಡಬೇಕಾಗಿರುವುದರಿಂದ ಮಕ್ಕಳ ಹಕ್ಕುಗಳ ರಕ್ಷಣೆ ಎಲ್ಲರ ಕರ್ತವ್ಯವಾಗಿದೆ. ಈ ಹಿನ್ನೆಲೆಯಲ್ಲಿ ಪಾಲನೆ ಮತ್ತು ರಕ್ಷಣೆಯ ಅಗತ್ಯ ಇರುವ ಮಕ್ಕಳಿಗೆ ತುರ್ತು ಸೇವೆ ನೀಡುವುದು ಈ ಸಹಾಯವಾಣಿಯ ಉದ್ದೇಶ ಎಂದು ಸ್ಪಷ್ಟಪಡಿಸಿದ್ದಾರೆ.