ಬೆಂಗಳೂರು: ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಇತರೆ ಧರ್ಮೀಯರಿಗೆ ಪ್ರಚೋದನೆ ನೀಡಿದ ಆರೋಪದಡಿ ಬಾಗಲಕೋಟೆಯ ಜಮಖಂಡಿಯ ಮೂವರು ವ್ಯಕ್ತಿಗಳ ವಿರುದ್ಧ ದಾಖಲಿಸಿದ್ದ ಎಫ್‌ಐಆರ್ ಮತ್ತು ಮುಂದಿನ ವಿಚಾರಣಾ ಪ್ರಕ್ರಿಯೆಯನ್ನು ಹೈಕೋರ್ಟ್ ರದ್ದುಪಡಿಸಿದೆ.
ಪ್ರಕರಣ ರದ್ದು ಕೋರಿ ಆರೋಪಿಗಳಾದ ಮುಸ್ತಾಫಾ, ಅಲಿಸಾಬ್ ಮತ್ತು ಸುಲೇಮನ್ ಎಂಬವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವೆಂಕಟೇಶ್ ಟಿ ನಾಯಕ್ ಅವರಿದ್ದ ಧಾರವಾಡ ಪೀಠ ಈ ಆದೇಶ ನೀಡಿದೆ.
ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ರಕ್ಷಣೆ ಕಾಯ್ದೆಯ ಸೆಕ್ಷನ್ 4ರ ಅಡಿಯಲ್ಲಿ ಧಾರ್ಮಿಕ ಮತಾಂತರಕ್ಕೆ ಪ್ರಚೋದನೆಗೆ ಒಳಗಾಗಿ ಮತಾಂತರಗೊಂಡ ವ್ಯಕ್ತಿಯ ರಕ್ತ ಸಂಬಂಧಿಕರು ಹಾಗೂ ಪೋಷಕರಿಗೆ ಮಾತ್ರ ದೂರು ಸಲ್ಲಿಸುವುದಕ್ಕೆ ಅಧಿಕಾರವಿದೆ. ಆದರೆ, ಈ ಪ್ರಕರಣದಲ್ಲಿ ದೂರು ದಾಖಲಿಸಿರುವ ವ್ಯಕ್ತಿ ಮೂರನೆಯವರಾಗಿದ್ದಾರೆ. ಅರ್ಜಿದಾರರ ವಿರುದ್ದ ಸೆಕ್ಷನ್ 3 ಅಡಿಯಲ್ಲಿ ತಿಳಿಸಿರುವಂತೆ, ಮತಾಂತರಕ್ಕೆ ಪ್ರಚೋದನೆ ಮಾಡಿರುವ ಸಂಬಂಧದ ಆರೋಪಗಳಿಲ್ಲ. ಹಾಗೆಯೇ, ಧರ್ಮ ಪ್ರಚಾರ ಮಾಡುವುದು ಮತಾಂತರಕ್ಕೆ ಪ್ರಚೋದಿಸಿದಂತಾಗುವುದಿಲ್ಲ. ಹೀಗಾಗಿ, ಎಫ್‌ಐಆರ್ ದಾಖಲಿಸಿರುವುದು ಕಾನೂನುಬಾಹಿರವಾಗಿದೆ ಎಂದು ಅಭಿಪ್ರಾಯಪಟ್ಟು ಪ್ರಕರಣ ರದ್ದುಪಡಿಸಿ ಹೈಕೋರ್ಟ್ ಆದೇಶಿಸಿದೆ.