ಚೆನ್ನೈ: ಕೊಲೆ ಯತ್ನ ಪ್ರಕರಣದಲ್ಲಿ ಆರೋಪಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದಕ್ಕೆ ಸಂಬಂಧಿಸಿದಂತೆ ವಿವರಣೆ ನೀಡುವಂತೆ ಸೂಚಿಸಿ ಮದ್ರಾಸ್ ಹೈಕೋರ್ಟ್, ಜಾಮೀನು ನೀಡಿದ ಜಿಲ್ಲಾ ನ್ಯಾಯಾಧೀಶರಿಗೆ ಸಮನ್ಸ್ ಜಾರಿ ಮಾಡಿದೆ.
ಈ ಕುರಿತಂತೆ ಮದ್ರಾಸ್ ಹೈಕೋರ್ಟ್, ತಮಿಳುನಾಡಿನ ಕಲ್ಲಕುರಿಚಿಯ ಪ್ರಧಾನ ಸೆಷನ್ಸ್ ನ್ಯಾಯಾಧೀಶ ಇರುಸನ್ ಪೂಂಗುಳಲಿ ಅವರಿಗೆ ಜುಲೈ 28 ರಂದು ಸಂಬಂಧಿತ ದಾಖಲೆಗಳೊಂದಿಗೆ ನ್ಯಾಯಾಲಯದ ಮುಂದೆ ಹಾಜರಾಗಲು ಮತ್ತು ಪ್ರಕರಣದ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿರುವ ಬಗ್ಗೆ ವಿವರಣೆ ನೀಡುವಂತೆ ಸೂಚಿಸಿದೆ
ಪ್ರಕರಣದ ಹಿನ್ನೆಲೆ: ವಿಲ್ಲುಪುರಂ ನಿವಾಸಿ ಎಸ್. ಲಕ್ಷ್ಮಿ ಬಾಲಾ ಎಂಬುವರ ಮನೆಗೆ ಸ್ಥಳೀಯ ರಾಜಕೀಯ ವ್ಯಕ್ತಿಗಳು ನುಗ್ಗಿ ದಾಂದಲೆ ನಡೆಸಿದ್ದರು. ಭೂಮಿಯನ್ನು ಕಬಳಿಸುವ ಉದ್ದೇಶದಿಂದ ತನ್ನ ಮನೆಗೆ ಅಕ್ರಮವಾಗಿ ಪ್ರವೇಶಿಸಿ ತನ್ನ ಮತ್ತು ತನ್ನ ಮಗನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಶಂಕರಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಬಗ್ಗೆ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದ ಕಾರಣ, ತನಿಖೆಯನ್ನು ಬೇರೆ ಸಂಸ್ಥೆಗೆ ವರ್ಗಾಯಿಸುವಂತೆ ಕೋರಿ ಲಕ್ಷ್ಮಿ ಬಾಲಾ ಹೈಕೋರ್ಟ್ ಮೊರೆ ಹೋಗಿದ್ದರು.
ಈ ಪ್ರಕರಣವನ್ನು ನ್ಯಾಯಮೂರ್ತಿ ಪಿ ವೇಲ್ಮುರುಗನ್ ಅವರಿದ್ದ ಪೀಠ ವಿಚಾರಣೆ ನಡೆಸುವಾಗ ಅರ್ಜಿದಾರೆ ಲಕ್ಷ್ಮೀ ಪರ ವಕೀಲರು ವಾದ ಮಂಡಿಸಿ, ದಾಳಿಯಲ್ಲಿ ಗಾಯಗೊಂಡ ಸಂತ್ರಸ್ತರು ಆಸ್ಪತ್ರೆಯಿಂದ ಬಿಡುಗಡೆಯಾಗುವ ಮೊದಲೇ ಸೆಷನ್ಸ್ ನ್ಯಾಯಾಲಯ ಆರೋಪಿಗೆ ಜಾಮೀನು ನೀಡಿದೆ. ಗಾಯಾಳು ಜುಲೈ 9ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಆದರೆ ಸೆಷನ್ಸ್ ನ್ಯಾಯಾಲಯ ಜುಲೈ 3ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆಂದು ಆರೋಪಿಗೆ ನಿರೀಕ್ಷಣಾ ಜಾಮೀನು ನೀಡಿದೆ ಎಂದು ವಿವರಿಸಿದರು.
ಇದಕ್ಕೆ ಸಮಜಾಯಿಸಿ ನೀಡಿದ ಪ್ರಾಸಿಕ್ಯೂಷನ್ ಪರ ವಕೀಲರು, ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಪೊಲೀಸ್ ತನಿಖಾಧಿಕಾರಿಗಳು ಸಂತ್ರಸ್ತೆ ಆಸ್ಪತ್ರೆಯಿಂದ ಬಿಡುಗಡೆಯಾಗಿರುವ ಕುರಿತಂತೆ ಪ್ರಾಸಿಕ್ಯೂಟರ್ ಗೆ ಮಾಹಿತಿ ನೀಡಿದ್ದಾರೆ. ಅದರಂತೆ ಪ್ರಾಸಿಕ್ಯೂಷನ್ ವಿಚಾರಣಾ ನ್ಯಾಯಾಲಯಕ್ಕೆ ಜುಲೈ 3ರಂದು ಗಾಯಾಳು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ತಿಳಿಸಿದೆ. ಈ ಮೇರೆಗೆ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಿದೆ ಎಂದು ತಿಳಿಸಿದರು.
ವಾದ ಪ್ರತಿವಾದ ಆಲಿಸಿದ ಹೈಕೋರ್ಟ್, ಕಲ್ಲಕುರಿಚಿಯ ಪ್ರಧಾನ ಸೆಷನ್ಸ್ ನ್ಯಾಯಾಧೀಶ ಇರುಸನ್ ಪೂಂಗುಳಲಿ ಅವರು ಜುಲೈ 28 ರಂದು ಸಂಬಂಧಿತ ದಾಖಲೆಗಳೊಂದಿಗೆ ನ್ಯಾಯಾಲಯದ ಮುಂದೆ ಹಾಜರಾಗಿ, ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿರುವ ಬಗ್ಗೆ ವಿವರಣೆ ನೀಡುವಂತೆ ಸೂಚಿಸಿದೆ.