Law

ಅಪ್ಪನ ಸಾಲಕ್ಕೆ ಮಗ ಹೊಣೆ: ಮರುಪಾವತಿಸಲು ಹೈಕೋರ್ಟ್ ಆದೇಶ

Share It

ಬೆಂಗಳೂರು: ಅಪ್ಪ ಪಡೆದಿದ್ದ ಸಾಲಕ್ಕೆ ಭದ್ರತೆಯಾಗಿ ಮಗ ಚೆಕ್‌ ನೀಡಿದ್ದರೆ, ಆತನು ಕೂಡ ಸಾಲಕ್ಕೆ ಬಾಧ್ಯಸ್ಥನಾಗತ್ತಾನೆ ಹಾಗೂ ನೆಗೋಷಿಯಬಲ್‌ ಇನ್ಸುಟ್ರುಮೆಂಟ್‌ ಆ್ಯಕ್ಟ್ ಪ್ರಕಾರ ಮಗ ಸಾಲವನ್ನು ಮರುಪಾವತಿ ಮಾಡಬೇಕಾಗುತ್ತದೆ ಎಂದು ಹೈಕೋರ್ಟ್‌ ಆದೇಶಿಸಿದೆ.

ದಾವಣಗೆರೆ ನಿವಾಸಿ ಪ್ರಸಾದ್‌ ರಾಯ್ಕರ್‌ ಎಂಬುವರು ಸಲ್ಲಿಸಿದ್ದ ಕ್ರಿಮಿನಲ್‌ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ನಟರಾಜನ್‌ ಅವರಿದ್ದ ಏಕಸದಸ್ಯ ಪೀಠ ಈ ತೀರ್ಪು ನೀಡಿದೆ.

ಹೈಕೋರ್ಟ್ ತನ್ನ ತೀರ್ಪುನಲ್ಲಿ, ಪ್ರಕರಣದ ಆರೋಪಿಯಾಗಿರುವ ವ್ಯಕ್ತಿಯ ತಂದೆ ದೂರುದಾರರಿಂದ ಸಾಲ ಪಡೆದಿದ್ದಾರೆ. ಈ ಸಾಲವನ್ನು ಹಿಂಪಾವತಿಸುವುದಾಗಿ ಮಗ ಒಪ್ಪಿ, ಅದಕ್ಕೆ ಖಾತ್ರಿಯಾಗಿ ಚೆಕ್ಕುಗಳನ್ನು ನೀಡಿದ್ದಾರೆ. ಇದೇ ವೇಳೆ ಆರೋಪಿ 10 ಸಾವಿರ ರೂ. ಹಣವನ್ನು ದೂರುದಾರರಿಗೆ ಮರುಪಾವತಿ ಮಾಡಿದ್ದಾರೆ. ಬಳಿಕ ತಂದೆಯ ಸಾಲಕ್ಕೆ ತಾನು ಬಾಧ್ಯಸ್ಥನಲ್ಲ ಎಂದು ಹೇಳಿದರೆ ಅದನ್ನು ಒಪ್ಪಲಾಗದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಅಲ್ಲದೆ, ನಿಯಮಗಳ ಪ್ರಕಾರ ಸಾಲಕ್ಕೆ ಖಾತ್ರಿ (ಗ್ಯಾರಂಟಿ) ನೀಡುವವರು ಹೇಗೆ ಬಾಧ್ಯಸ್ಥರಾಗುತ್ತಾರೋ ಅದೇ ರೀತಿ, ಚೆಕ್‌ ನೀಡಿದ ಪುತ್ರನೂ ಹೊಣೆಗಾರನಾಗುತ್ತಾನೆ. ತಂದೆಯ ಕಾನೂನುಬದ್ಧ ವಾರಸುದಾರ ಆಗಿರುವ ಪುತ್ರ ಸಾಲ ಮರುಪಾವತಿ ಮಾಡಬೇಕು ಎಂದು ಹೈಕೋರ್ಟ್ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: ಪ್ರಕರಣದ ಆರೋಪಿ ದಿನೇಶ್‌ ತಂದೆ ಭರಮಪ್ಪ ಎಂಬುವವರು ದೂರುದಾರ ಪ್ರಸಾದ್‌ ಎಂಬುವರಿಂದ 2003ರ ಮಾರ್ಚ್ 7ರಂದು 2.6 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಶೇಕಡಾ 2ರ ಬಡ್ಡಿ ಸೇರಿಸಿ ಹಣ ಮರುಪಾವತಿ ಮಾಡುವುದಾಗಿ ಪ್ರಾಮಿಸರಿ ನೋಟ್‌ ಬರೆದುಕೊಟ್ಟಿದ್ದರು. ಆದರೆ, 2005ರಲ್ಲಿ ಭರಮಪ್ಪ ಮೃತಪಟ್ಟರು.

ಈ ವೇಳೆಗೆ ಸಾಲದ ಮೊತ್ತ ಬಡ್ಡಿ ಸೇರಿ 4.5 ಲಕ್ಷ ರೂಪಾಯಿ ಆಗಿತ್ತು. ಆ ಬಳಿಕ ದಿನೇಶ್‌ ಅವರು 10 ಸಾವಿರ ರೂಪಾಯಿ ಮರುಪಾವತಿ ಮಾಡಿ, ಉಳಿದ ಹಣವನ್ನು ಎರಡು ಕಂತುಗಳಲ್ಲಿ ನೀಡುವುದಾಗಿ ಹೇಳಿ 2.25 ಲಕ್ಷ ರೂಪಾಯಿ ಮೊತ್ತದ ಎರಡು ಚೆಕ್‌ ಗಳನ್ನು ನೀಡಿದ್ದರು. ಆದರೆ, ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲದೆ ಎರಡೂ ಚೆಕ್‌ಗಳು ಬೌನ್ಸ್‌ ಆಗಿದ್ದವು. ಈ ಹಿನ್ನೆಲೆಯಲ್ಲಿ ದೂರುದಾರ ಪ್ರಸಾದ್‌ ಅವರು ಕೋರ್ಟ್ ಮೆಟ್ಟಿಲೇರಿದ್ದರು.

ದೂರಿನ ವಿಚಾರಣೆ ನಡೆಸಿದ್ದ ದಾವಣಗೆರೆ ಜೆಎಂಎಫ್‌ಸಿ ನ್ಯಾಯಾಲಯ ಅಪ್ಪನ ಕಾನೂನು ಬದ್ಧ ವಾರಸುದಾರನಾದ ಮಗ ಸಾಲವನ್ನು ಮರುಪಾವತಿ ಮಾಡಬೇಕು ಎಂದು ಆದೇಶಿಸಿತ್ತು. ಆದರೆ, ಸೆಷನ್ಸ್‌ ನ್ಯಾಯಾಲಯ ಹಣ ಮರು ಪಾವತಿಸಬೇಕಾಗಿಲ್ಲ ಎಂದು ತೀರ್ಪು ನೀಡಿತ್ತು. ಸೆಷನ್ಸ್ ಕೋರ್ಟ್ ಆದೇಶ ಪ್ರಶ್ನಿಸಿ ದೂರುದಾರ ಪ್ರಸಾದ್‌ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

(CRL.A 725/2011)


Share It

You cannot copy content of this page