News

SC-ST ದೌರ್ಜನ್ಯ ತಡೆ ಕಾಯ್ದೆ: ಮೇಲ್ಮನವಿ ಕಾಲಮಿತಿ ಸರ್ಕಾರದ ವಿವೇಚನೆಗೆ ಸೇರಿದ್ದು

Share It

ಬೆಂಗಳೂರು: ವಿಶೇಷ ನ್ಯಾಯಾಲಯಗಳು ಖುಲಾಸೆಗೊಳಿಸಿದ ಪ್ರಕರಣಗಳ ವಿರುದ್ಧ ಮೇಲ್ಮನವಿ ಸಲ್ಲಿಸಲು ಹೆಚ್ಚಿನ ಸಮಯಾವಕಾಶ ನೀಡಲು ಸರ್ಕಾರ ಬಯಸಿದರೆ, ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಗೆ ತಿದ್ದುಪಡಿ ತರುವುದು ಶಾಸಕಾಂಗದ ವಿವೇಚನೆಗೆ ಬಿಟ್ಟದ್ದು ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಯಾದಗಿರಿಯ ವಿಚಾರಣಾ ನ್ಯಾಯಾಲಯವು ಸೆಪ್ಟೆಂಬರ್ 7, 2023 ರಂದು ಎಸ್ಸಿ-ಎಸ್ಟಿ ದೌರ್ಜನ್ಯ ಪ್ರಕರಣದ ಆರೋಪಿಗಳನ್ನು ಖುಲಾಸೆಗೊಳಿಸಿತ್ತು. ಇದಾದ 381 ದಿನಗಳ ನಂತರ ರಾಜ್ಯ ಸರ್ಕಾರ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿತ್ತು. ಈ ಅರ್ಜಿಯನ್ನು ಕಾಲಮಿತಿಯಲ್ಲಿ ಸಲ್ಲಿಸಿಲ್ಲ ಎಂಬ ಆಧಾರದಲ್ಲಿ ವಜಾಗೊಳಿಸುವಾಗ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯ ಸೆಕ್ಷನ್ 14-A(3) ರ ಅನುಸಾರ ಖುಲಾಸೆಯಾದ ಆರೋಪಿತರ ವಿರುದ್ಧ ರಾಜ್ಯ ಸರ್ಕಾರ ಮೇಲ್ಮನವಿಗಳನ್ನು ನಿಯಮಾನುಸಾರ 180 ದಿನಗಳ ಒಳಗೆ ಸಲ್ಲಿಸಬೇಕು. ಆದರೆ ಸರ್ಕಾರ ತೀವ್ರ ವಿಳಂಬವಾಗಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಅರ್ಜಿಯನ್ನು ವಜಾಗೊಳಿಸಲಾಗಿದೆ.

ಇನ್ನು ಪ್ರಕರಣವು 2014 ರಲ್ಲಿ ಭೂ ವಿವಾದಕ್ಕೆ ಸಂಬಂಧಿಸಿದ ಗುಂಪು ಘರ್ಷಣೆಗೆ ಸಂಬಂಧಿಸಿದ್ದು, ಇದರಲ್ಲಿ ಬಸಲಿಂಗಪ್ಪ ಮತ್ತು ಇತರ ಐದು ರೈತರ ವಿರುದ್ಧ ಐಪಿಸಿಯ ವಿವಿಧ ಸೆಕ್ಷನ್‌ಗಳು ಮತ್ತು ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ವಿಶೇಷ ನ್ಯಾಯಾಲಯವು ಸಾಕಷ್ಟು ಪುರಾವೆಗಳಿಲ್ಲ ಎಂದು ಉಲ್ಲೇಖಿಸಿ ಆರೋಪಿತರನ್ನು ಖುಲಾಸೆಗೊಳಿಸಿತ್ತು.

ಹಲವಾರು ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಪರಿಶೀಲಿಸಿದ ನಂತರ, ಶಹಾಪುರ ಪೊಲೀಸರು ಅಕ್ಟೋಬರ್ 2024 ರಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ವೇಳೆ ಆರೋಪಿಗಳು ಮೇಲ್ಮನವಿ ಸಲ್ಲಿಸಲು ಶಾಸನಬದ್ಧ ಗಡುವನ್ನು ಮೀರಲಾಗಿದೆ. ಹೀಗಾಗಿ ಅರ್ಜಿ ವಿಚಾರಣೆಗೆ ಯೋಗ್ಯವಲ್ಲ ಎಂದು ವಾದಿಸಿದ್ದರು.

ವಿಳಂಬವನ್ನು ಸಮರ್ಥಿಸಿಕೊಂಡಿದ್ದ ಪ್ರಾಸಿಕ್ಯೂಷನ್ ಅರ್ಜಿ ಸಲ್ಲಿಸಲು ಉದ್ದೇಶಪೂರ್ವಕವಾಗಿ ತಡ ಮಾಡಿಲ್ಲ ಎಂದು ವಾದಿಸಿತ್ತು. ಮೇಲ್ಮನವಿ ಸಲ್ಲಿಸಲು ಸರ್ಕಾರ ಆದೇಶವನ್ನು ಈ ಮೊದಲೇ ಹೊರಡಿಸಿತ್ತು, ಆದರೆ ನ್ಯಾಯಾಲಯದ ದಾಖಲೆಗಳ ಪ್ರತಿಗಳನ್ನು ಪಡೆಯುವಾಗ ಅಧಿಕಾರಿಗಳಿಗೆ ಕೊಂಚ ತಡ ಮಾಡಿದ್ದಾರೆ. ಹೀಗಾಗಿ ಮೇಲ್ಮನವಿ ವಿಚಾರಣೆಗೆ ಅರ್ಹವಿದೆ. ಜತೆಗೆ, ತಾಂತ್ರಿಕ ವಿಚಾರಗಳು ವಸ್ತುನಿಷ್ಠ ನ್ಯಾಯವನ್ನು ಅತಿಕ್ರಮಿಸಬಾರದು ಎಂದು ರಾಜ್ಯ ಸರ್ಕಾರಿ ಅಭಿಯೋಜಕರು ವಾದಿಸಿದ್ದರು.

ವಾದ ಪ್ರತಿವಾದ ಆಲಿಸಿದ ನ್ಯಾ. ವಿ. ಶ್ರೀಶಾನಂದ ಅವರಿದ್ದ ನ್ಯಾಯಪೀಠ, ನ್ಯಾಯಾಲಯವು ಸೆಕ್ಷನ್ 14-ಎ (3) ರ ನಿಯಮಕ್ಕೆ ಬದ್ಧವಾಗಿದೆ. 180 ದಿನಗಳನ್ನು ಮೀರಿ ಸಲ್ಲಿಸಲಾದ ಮೇಲ್ಮನವಿಗಳನ್ನು ಪರಿಗಣಿಸುವುದನ್ನು ನಿಯಮವೇ ಸ್ಪಷ್ಟವಾಗಿ ನಿಷೇಧಿಸುತ್ತದೆ ಎಂದು ತಿಳಿಸಿ ಮೇಲ್ಮನವಿಯನ್ನು ವಜಾ ಮಾಡಿದೆ.

ಇದರ ಹೊರತಾಗಿಯೂ ಸ್ಟೇಟ್ ಪಬ್ಲಿಕ್ ಪ್ರಾಸಿಕ್ಯೂಟರ್ ಅವರ ಕಳವಳಗಳನ್ನು ಒಪ್ಪಿಕೊಂಡ ನ್ಯಾಯಾಧೀಶರು, ಇಂತಹ ಸಮಸ್ಯೆಗೆ ಪರಿಹಾರ ಶಾಸಕಾಂಗದಲ್ಲಿದೆ, ನ್ಯಾಯಾಲಯದಲ್ಲಿ ಅಲ್ಲ. ನಿರ್ಲಕ್ಷದ ಹೊರತಾಗಿಯೂ ವಿಳಂಬ ಉಂಟಾದಾಗುತ್ತಿದ್ದರೆ, ಸರ್ಕಾರ ಕಾಯ್ದೆಗೆ ತಿದ್ದುಪಡಿ ಮಾಡಬಹುದು. ಸೂಕ್ತ ತಿದ್ದುಪಡಿಗಳನ್ನು ಪರಿಗಣಿಸಲು ರಾಜ್ಯ ಸಾರ್ವಜನಿಕ ಅಭಿಯೋಜಕರು ಈ ಆದೇಶವನ್ನು ಸೂಕ್ತ ಪ್ರಾಧಿಕಾರದ ಗಮನಕ್ಕೆ ತರಬಹುದು ಎಂದು ಹೇಳಿದ್ದಾರೆ.


Share It

You cannot copy content of this page