ಅತ್ಯಾಚಾರ ಪ್ರಕರಣದ ಆರೋಪಿ ಹಾಗೂ ಸಂತ್ರಸ್ತೆ ಜಂಟಿಯಾಗಿ ಸಲ್ಲಿಸಿದ್ದ ಮನವಿ ಪರಿಗಣಿಸಿದ ಹೈಕೋರ್ಟ್ ಆರೋಪಿ ವಿರುದ್ಧ ದಾಖಲಿಸಿದ್ದ ಕೇಸ್ ನ್ನು ರದ್ದುಪಡಿಸಿ ಆದೇಶಿಸಿದೆ.
ಇದೇ ವೇಳೆ ಸಂತ್ರಸ್ತೆಯನ್ನು ವಿವಾಹವಾಗಿರುವ ಆರೋಪಿ ಆಕೆಯನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಹಾಗೂ ಯಾವುದೇ ರೀತಿಯಲ್ಲಿ ತೊಂದರೆ ನೀಡದಂತೆ ಸೂಚಿಸಿ ಪೊಲೀಸರು ದಾಖಲಿಸಿದ್ದ ಅತ್ಯಾಚಾರ, ಹಣವಸೂಲಿ ಹಾಗೂ ಜೀವಬೆದರಿಕೆ ಪ್ರಕರಣವನ್ನು ರದ್ದುಪಡಿಸಿದೆ.
2022 ರ ಅಕ್ಟೋಬರ್ ನಲ್ಲಿ 30 ವರ್ಷದ ಯುವತಿಯೊಬ್ಬರು ಆರೋಪಿ ವಿರುದ್ಧ ಬೆಂಗಳೂರು ಪೊಲೀಸರಿಗೆ ಅತ್ಯಾಚಾರ ಮತ್ತಿತರೆ ಆರೋಪಗಳಡಿ ದೂರು ಸಲ್ಲಿಸಿದ್ದರು. ದೂರಿನ ಮೇರೆಗೆ ಪೊಲೀಸರು ಅತ್ಯಾಚಾರ, ಹಣ ವಸೂಲಿ ಹಾಗೂ ಜೀವ ಬೆದರಿಕೆ ಆರೋಪದಡಿ ಎಫ್ಐಆರ್ ದಾಖಲಿಸಿದ್ದರು.
ಈ ಪ್ರಕರಣವನ್ನು ರದ್ದು ಕೋರಿ ಆರೋಪಿ ಹೈಕೋರ್ಟ್ ಮೆಟ್ಟಿಲೇರಿದ್ದ. ತಾನು ಸಂತ್ರಸ್ತೆಯನ್ನು ವಿವಾಹವಾಗಿದ್ದರೂ ಪೊಲೀಸರು ತನ್ನ ವಿರುದ್ಧ ಎಫ್ಐಆರ್ ದಾಖಲಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಕ್ರಮ ಸೂಕ್ತವಲ್ಲ. ಹಾಗೂ ತನ್ನ ವಿರುದ್ಧ ಪೊಲೀಸರು ದಾಖಲಿಸಿರುವ ಪ್ರಕರಣ ರದ್ದುಪಡಿಸಬೇಕು ಎಂದು ಕೋರಿದ್ದರು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಆರೋಪಿ ಹಾಗೂ ಸಂತ್ರಸ್ತೆ ಪರಸ್ಪರ ಪ್ರೀತಿಸುತ್ತಿದ್ದರು. ಭಿನ್ನಾಭಿಪ್ರಾಯ ಮೂಡಿದ ನಂತರ ಸಂತ್ರಸ್ತೆ ದೂರು ಸಲ್ಲಿಸಿದ್ದರು. ಆ ನಂತರ ದೂರು ಹಿಂಪಡೆಯುವುದಾಗಿ ತಿಳಿಸಿದ್ದರೂ ಪೊಲೀಸರು ಒಪ್ಪದೆ ಎಫ್ಐಆರ್ ದಾಖಲಿಸಿದ್ದಾರೆ. ಆರೋಪಿ ಸಂತ್ರಸ್ತೆಯನ್ನು ವಿವಾಹವಾಗಿದ್ದಾರೆ.
ಪ್ರಸ್ತುತ ಆರೋಪಿ ಹಾಗೂ ಸಂತ್ರಸ್ತೆ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಮದುವೆಯಾಗಿ ನೆಮ್ಮದಿಯ ಸಂಸಾರ ನಡೆಸುತ್ತಿದ್ದಾರೆ. ಪ್ರಕರಣ ಹಿಂಪಡೆಯಲು ಇಬ್ಬರೂ ಜಂಟಿ ಅಫಿಡವಿಟ್ ಸಲ್ಲಿಸಿದ್ದಾರೆ. ಮನವಿಯನ್ನು ನ್ಯಾಯಾಲಯ ಪರಿಗಣಿಸಿ ಪ್ರಕರಣ ರದ್ದುಪಡಿಸಬೇಕು” ಎಂದು ಕೋರಿದ್ದರು. ಆರೋಪಿ ಹಾಗೂ ಸಂತ್ರಸ್ತೆ ಜಂಟಿಯಾಗಿ ಸಲ್ಲಿಸಿದ್ದ ಮನವಿ ಪರಿಗಣಿಸಿದ ಹೈಕೋರ್ಟ್, ಆರೋಪಿ ವಿರುದ್ಧದ ಪ್ರಕರಣ ರದ್ದುಪಡಿಸಿದೆ.
(CRL.P 93/2023)