ಲೇಖನ: ಮಂಜೇಗೌಡ ಕೆ.ಜಿ, ವಕೀಲರು, ಎಂಜಿ ಲೀಗಲ್, ಬೆಂಗಳೂರು.
ಅತ್ಯಾಚಾರ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಆರೋಪಿ ಹಾಗೂ ಸಂತ್ರಸ್ತೆ ಜಂಟಿಯಾಗಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಅಲ್ಲದೇ, ಅತ್ಯಾಚಾರ ಹೀನ ಕೃತ್ಯವಾಗಿರುವ ಕಾರಣ ಸಂತ್ರಸ್ತೆ ಸಮ್ಮತಿ ನೀಡಿದರೆಂದು ಅಥವಾ ಆರೋಪಿಯು ಸಂತ್ರಸ್ತೆಯನ್ನು ಮದುವೆ ಆಗಿದ್ದಾನೆ ಎಂಬ ಕಾರಣಕ್ಕೆ ಕೇಸ್ ರದ್ದುಪಡಿಸಲಾಗದು ಎಂದು ಅಭಿಪ್ರಾಯಪಟ್ಟಿದೆ.
ಅತ್ಯಾಚಾರ ಆರೋಪದಡಿ ನ್ಯಾಯಾಂಗ ಬಂಧನದಲ್ಲಿರುವ ವಿಜಯಪುರದ ಆರೋಪಿ ಹಾಗೂ ಸಂತ್ರಸ್ತೆ ಇಬ್ಬರೂ ಜಂಟಿಯಾಗಿ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕ ಸದಸ್ಯ ಪೀಠ ಈ ಆದೇಶ ಮಾಡಿದೆ.
ಹಿನ್ನೆಲೆ: ಸಂತ್ರಸ್ತೆ ಜತೆ ಸಲುಗೆಯಿಂದಿದ್ದ ಆರೋಪಿ 2019ರಲ್ಲಿ ಆಕೆಯನ್ನು ಅಪಹರಿಸಿ, ಅತ್ಯಾಚಾರ ಎಸಗಿದ್ದಾನೆ ಎಂದು ಪೋಷಕರು ದೂರು ನೀಡಿದ್ದರು. ಈ ದೂರಿನ ಮೇರೆಗೆ ವಿಜಯಪುರ ಜಿಲ್ಲೆಯ ಬಸವನ ಬಾಗೆವಾಡಿ ಠಾಣೆ ಪೊಲೀಸರು ಆರೋಪಿತನ ವಿರುದ್ಧ ಅತ್ಯಾಚಾರ ಹಾಗೂ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದರು.
ಪ್ರಕರಣ ವಿಜಯಪುರದ 2ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ಮತ್ತು ಪೋಕ್ಸೋ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಈ ನಡುವೆ ಜೈಲು ಸೇರಿರುವ ಆರೋಪಿ ಹಾಗೂ ಸಂತ್ರಸ್ತೆ ಜಂಟಿಯಾಗಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿ ಪ್ರಕರಣ ರದ್ದುಪಡಿಸುವಂತೆ ಕೋರಿದ್ದರು. ನಾವಿಬ್ಬರೂ ಒಪ್ಪಿಗೆ ಮೇರೆಗೆ ಮದುವೆಯಾಗಿದ್ದು, ಮಗು ಜನಿಸಿದೆ. ಆದರೆ, ಪತಿ ಈಗಲೂ ಜೈಲಿನಲ್ಲಿದ್ದಾರೆ. ಹೀಗಾಗಿ ಪ್ರಕರಣ ರದ್ದುಪಡಿಸಬೇಕು ಎಂದು ಕೋರಿದ್ದರು.
ಹೈಕೋರ್ಟ್ ತೀರ್ಪು: ಪ್ರಕರಣವನ್ನು ರದ್ದುಪಡಿಸಲು ಆರೋಪಿ ಹಾಗೂ ಸಂತ್ರಸ್ತೆ ಜಂಟಿಯಾಗಿ ಸಲ್ಲಿಸಿರುವ ಮನವಿ ತಿರಸ್ಕರಿಸಿರುವ ಪೀಠ, ‘ಘಟನೆ ನಡೆದಾಗ ಸಂತ್ರಸ್ತೆ ಅಪ್ರಾಪ್ತಳಾಗಿದ್ದಳು ಎನ್ನಲಾಗಿದೆ. ಅದರಂತೆ, ಸಂತ್ರಸ್ತೆ ಅಪ್ರಾಪ್ತಳಾಗಿದ್ದರೆ, ಆಕೆ ಲೈಂಗಿಕ ಸಂಬಂಧಕ್ಕೆ ಒಪ್ಪಿಗೆ ನೀಡಿದ್ದರೂ ಅದನ್ನು ಒಪ್ಪಿಗೆ ಎಂದು ಪರಿಗಣಿಸಲಾಗದು.
ಇನ್ನು, ಸಂತ್ರಸ್ತೆ ವಿಚಾರಣಾ ನ್ಯಾಯಾಲಯದ ಎದುರು, ಘಟನೆ ನಡೆದಾಗ ತನಗೆ 19 ವರ್ಷ ವಯಸ್ಸಾಗಿತ್ತು ಎಂದು ಹೇಳಿಕೆ ನೀಡಿದ್ದಾಳೆ. ಘಟನೆ ನಡೆದಾಗ ಸಂತ್ರಸ್ತೆ ಅಪ್ರಾಪ್ತಳಾಗಿದ್ದಳೇ ಅಥವಾ ವಯಸ್ಕಳಾಗಿದ್ದಳೇ ಎಂಬುದನ್ನು ವಿಚಾರಣಾ ನ್ಯಾಯಾಲಯವೇ ತೀರ್ಮಾನಿಸಬೇಕು.
ಆರೋಪಿ ಸಂತ್ರಸ್ತೆಯನ್ನು ಮದುವೆಯಾಗಿದ್ದಾನೆ. ಇಬ್ಬರೂ ಪ್ರಕರಣ ರದ್ದುಪಡಿಸುವಂತೆ ಕೋರಿದ್ದಾರೆ ಎಂಬ ಕಾರಣಕ್ಕೆ ಅತ್ಯಾಚಾರದಂತಹ ಗಂಭೀರ ಪ್ರಕರಣವನ್ನು ರದ್ದುಪಡಿಸಲಾಗದು. ಅತ್ಯಾಚಾರದಂತಹ ಹೀನ ಕೃತ್ಯ ನಡೆದಾಗ ಆರೋಪಿ-ಸಂತ್ರಸ್ತೆ ಒಪ್ಪಿಗೆ ನೀಡಿದರೂ ಪ್ರಕರಣ ರದ್ದುಪಡಿಸಬಾರದು ಎಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹೇಳಿದೆ.
ಮುಖ್ಯವಾಗಿ ಅರ್ಜಿದಾರರು ಕೋರಿರುವಂತೆ ಅತ್ಯಾಚಾರ ಆರೋಪ ಪ್ರಕರವಣನ್ನು ಸಿ.ಆರ್.ಪಿ.ಸಿ ಸೆಕ್ಷನ್ 482 ರ ಅಡಿ ನ್ಯಾಯಾಲಯದ ಅಧಿಕಾರ ಬಳಸಿ ರದ್ದುಪಡಿಸಿದರೆ ಅದು ಸಮಾಜಕ್ಕೆ ಕೆಟ್ಟ ಸಂದೇಶ ರವಾನಿಸಿದಂತಾಗುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿದೆ. ಇದೇ ವೇಳೆ, ಅರ್ಜಿ ಕುರಿತು ಹೈಕೋರ್ಟ್ ವ್ಯಕ್ತಪಡಿಸಿರುವ ಅಭಿಪ್ರಾಯವನ್ನು ವಿಚಾರಣಾ ನ್ಯಾಯಾಲಯ ಪರಿಗಣಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
(CRL.P 201199/2021)
