News

ನಕಲಿ ದಾಖಲೆ: ಬಿಎಂಟಿಸಿ ಚಾಲಕನ ವಜಾ ಎತ್ತಿ ಹಿಡಿದ ಹೈಕೋರ್ಟ್

Share It

ಬೆಂಗಳೂರು: ನಕಲಿ ದಾಖಲೆಗಳನ್ನು ಸಲ್ಲಿಸಿ ಚಾಲಕನ ಹುದ್ದೆ ಪಡೆದು 17 ವರ್ಷಗಳ ಕಾಲ ಕೆಲಸ ಮಾಡಿದ್ದ ವ್ಯಕ್ತಿಯನ್ನು ವಜಾಗೊಳಿಸಿದ್ದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಯ ಕ್ರಮವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.

1988ರಲ್ಲಿ ನಕಲಿ ದಾಖಲೆ ಸಲ್ಲಿಸಿ ಚಾಲಕ ಹುದ್ದೆಗೆ ಸೇರ್ಪಡೆಗೊಂಡಿದ್ದ ದೊಡ್ಡಗುಬ್ಬಿ ಬಳಿಯ ಯಾರಪ್ಪನಹಳ್ಳಿಯ ಮಾಲೂರಪ್ಪನನ್ನು ವಜಾಗೊಳಿಸಿದ್ದ ಬಿಎಂಟಿಸಿ ಕ್ರಮದಲ್ಲಿ ಯಾವುದೇ ದೋಷವಿಲ್ಲ ಎಂದು ಹೈಕೋರ್ಟ್ ಏಕಸದಸ್ಯ ಪೀಠ ಹೊರಡಿಸಿದ್ದ ಆದೇಶವನ್ನು ಮುಖ್ಯ ನ್ಯಾಯಮೂರ್ತಿ ವಿಭು ಖಬ್ರು ಮತ್ತು ನ್ಯಾಯಮೂರ್ತಿ ಸಿ.ಎಂ.ಜೋಶಿ ಅವರಿದ್ದ ವಿಭಾಗೀಯ ಪೀಠ ಎತ್ತಿಹಿಡಿದಿದೆ.

ಅಲ್ಲದೆ, ಮಾಲೂರಪ್ಪ ಬದಲಿ ಚಾಲಕನ ಹುದ್ದೆಗೆ ಅನರ್ಹರಾಗಿದ್ದೂ, ನಕಲಿ ದಾಖಲೆ ಸಲ್ಲಿಸಿ ಆ ಹುದ್ದೆ ಗಿಟ್ಟಿಸಿಕೊಂಡಿದ್ದಾರೆ. ಈ ಅಂಶವನ್ನು ಪರಿಗಣಿಸಿ ಅವರನ್ನು ಸೇವೆಯಿಂದ ವಜಾಗೊಳಿಸಿರುವುದು ಸೂಕ್ತವಾಗಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ವಿವರಿಸಿದೆ.

1990ರಲ್ಲಿ ಬದಲಿ ಚಾಲಕನ ಹುದ್ದೆಗೆ ಕನಿಷ್ಠ 4ನೇ ತರಗತಿಯವರೆಗೆ ಶಿಕ್ಷಣ ಪಡೆದಿರಬೇಕು ಎಂಬ ಷರತ್ತು ವಿಧಿಸಲಾಗಿತ್ತು. ಆದರೆ ಕೇವಲ 1ನೇ ತರಗತಿ ಓದಿದ್ದ ಮಾಲೂರಪ್ಪ, ತಾನು 9ನೇ ತರಗತಿವರೆಗೆ ಓದಿದ್ದೇನೆ ಎಂದು ನಕಲಿ ಶಾಲಾ ವರ್ಗಾವಣೆ ಪ್ರಮಾಣಪತ್ರ (ಟಿಸಿ) ಸಲ್ಲಿಸಿದ್ದರು. ಈ ಆರೋಪ ಸಂಬಂಧ ಬಿಎಂಟಿಸಿ ಅವರ ವಿರುದ್ಧ ಇಲಾಖಾ ವಿಚಾರಣೆ ಆರಂಭಿಸಿತ್ತು.

ಸುಮಾರು ಒಂದು ದಶಕಕ್ಕೂ ಹೆಚ್ಚು ಕಾಲ ವಿಚಾರಣೆ ನಡೆಸಿದ್ದ ಬಿಎಂಟಿಸಿ 2005ರಲ್ಲಿ ಮಾಲೂರಪ್ಪ ಅವರನ್ನು ಸೇವೆಯಿಂದ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಅವರು ಕಾರ್ಮಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. 2016ರಲ್ಲಿ ಕಾರ್ಮಿಕ ನ್ಯಾಯಾಲಯ ಅರ್ಜಿದಾರರು ಸುದೀರ್ಘ ಸೇವೆ ಸಲ್ಲಿಸಿದ್ದಾರೆ. ಹೀಗಾಗಿ, ಅವರನ್ನು ಸೇವೆಯಿಂದ ವಜಾಗೊಳಿಸುವುದು ಅತ್ಯಂತ ಕಠಿಣ ಕ್ರಮ. ಹೀಗಾಗಿ, ಯಾವುದೇ ಹಿಂಬಾಕಿ ಪಾವತಿ ಮಾಡದೆ, ಮೂರು ವರ್ಷಗಳ ಕಾಲ ವೇತನ ಹೆಚ್ಚಳ ಮಾಡದೆ, ಸೇವೆಯಲ್ಲಿ ಮುಂದುವರೆಸಿ ಎಂದು ನಿರ್ದೇಶಿಸಿತ್ತು.

ಕಾರ್ಮಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಬಿಎಂಟಿಸಿ 2017ರಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠ, ಕಾರ್ಮಿಕ ನ್ಯಾಯಾಲಯದ ಆದೇಶ ರದ್ದುಪಡಿಸಿ, ಮಾಲೂರಪ್ಪ ಅವರನ್ನು ವಜಾಗೊಳಿಸಿದ್ದ ಬಿಎಂಟಿಸಿ ಕ್ರಮವನ್ನು ಎತ್ತಿಹಿಡಿದಿತ್ತು. ಇದನ್ನು ಪ್ರಶ್ನಿಸಿ ಮಾಲೂರಪ್ಪ ದ್ವಿಸದಸ್ಯ ನ್ಯಾಯಪೀಠಕ್ಕೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ವಿಭಾಗೀಯ ಪೀಠ ಇದೀಗ ಬಿಎಂಟಿಸಿ ಕ್ರಮ ಸೂಕ್ತವಿದೆ ಎಂದು ತೀರ್ಪು ನೀಡಿದೆ.


Share It

You cannot copy content of this page