ಬೆಂಗಳೂರು: ಪ್ರತಿಯೊಬ್ಬ ದಲಿತನೂ ಆತ್ಮಕಥೆ ಬರೆಯಬೇಕು ಎಂದು ಪ್ರಸಿದ್ಧ ಕವಿ, ಹಿರಿಯ ಚಿಂತಕ ಡಾ.ಮೂಡ್ನಾಕೂಡು ಚಿನ್ನಸ್ವಾಮಿ ಸಲಹೆ ನೀಡಿದರು.
ಭಾನುವಾರ ನಗರದಲ್ಲಿ ತೊಳಸಿ ಪ್ರಕಾಶನ ಆಯೋಜಿಸಿದ್ದ ಸಮಾರಂಭದಲ್ಲಿ ಹೆಮ್ಮಂಡಹಳ್ಳಿ ಜಿ.ಮುನಿಸ್ವಾಮಿ ಅವರ “ಹೆಮ್ಮಂಡಹಳ್ಳಿಯಿಂದ.” ಆತ್ಮಕಥನ ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಈಗಾಗಲೇ ಬಂದಿರುವ ದಲಿತ, ಬಂಡಾಯ ಆತ್ಮಕಥನಗಳು ಭಾರತೀಯ ಸಾಹಿತ್ಯದಲ್ಲಿ ಹೊಸ ಮೈಲಿಗಲ್ಲಿಗೆ ಕಾರಣವಾಗಿವೆ. ಈ ನಿಟ್ಟಿನಲ್ಲಿ ಜಿ.ಮುನಿಸ್ವಾಮಿ ಅವರು ಛಲದಿಂದ ಆತ್ಮಕಥೆಯನ್ನು ರಚಿಸಿದ್ದು ತುಂಬಾ ವಿಶೇಷತೆಯಿಂದ ಕೂಡಿದೆ ಎಂದು ನುಡಿದರು.
ಇವರು ಬರೆದಿರುವ ನಾನಾ ಸಂಗತಿಗಳು ಎಂತಹವರನ್ನು ಆಕರ್ಷಣೆಯಿಂದ ಸೆಳೆಯುವಂತೆ ಮಾಡುತ್ತವೆ. ಅವರು ಬಾಲ್ಯದಲ್ಲಿನ ಕೆಲ ರೋಚಕ ಕ್ಷಣಗಳನ್ನು ಅಕ್ಷರ ರೂಪಕ್ಕಿಳಿಸಿರುವುದು ವಿಭಿನ್ನತೆಯಿಂದ ಕೂಡಿದೆ. ಶಿಕ್ಷಣ ಪಡೆಯಬೇಕು, ಜೊತೆಗೆ ಅತ್ಯುತ್ತಮ ಜ್ಞಾನಗಳಿಸಿ ಇತರರಂತೆ ಉದ್ಯೋಗಗಳಿಸಲೇಬೇಕು ಎಂಬ ಛಲವಂತಿಕೆಗಳನ್ನು ವಿವರಿಸುತ್ತಾ ಸಾಗಿರುವ ವೈಖರಿಯೇ ವಿಶೇಷವಾಗಿದೆ ಎಂದು ಹೇಳಿದರು.
ಹಿರಿಯ ವಿಮರ್ಶಕ ಡಾ.ಬಸವರಾಜ್ ಕಲ್ಗುಡಿ ಮಾತನಾಡಿ, ಕನ್ನಡದಲ್ಲಿ ಹಲವು ತರಹದ ಆತ್ಮಕಥನಗಳು ಬಂದಿವೆ. ಮುಖ್ಯವಾಗಿ ಸಾಹಿತಿಗಳು, ಚಿಂತಕರು ಒಳಗೊಂಡು ಇತರರು ಅತ್ಯುತ್ತಮವಾಗಿ ಆತ್ಮಕಥನ ರಚಿಸಿದ್ದಾರೆ. ಪ್ರಮುಖವಾಗಿ ಕೆಲ ಆತ್ಮಕಥನಗಳಲ್ಲಿ ಬಚ್ಚಿಡುವಂತಹ ಸಂಗತಿಗಳನ್ನು ಕಾಣಬಹುದಾದರೆ, ಇನ್ನಿತರೆಗಳಲ್ಲಿ ಬಿಚ್ಚಿಡುವಂತಹ ಸಂಗತಿಗಳನ್ನು ಸೂಕ್ಷ್ಮವಾಗಿ ಗಮನಿಸಬಹುದಾಗಿದೆ. ಜಿ.ಮುನಿಸ್ವಾಮಿ ಅವರ ಆತ್ಮಕಥನದಲ್ಲಿ ಬಿಚ್ಚಿಡುವಂತಹ ಅನೇಕ ಅನುಭವಗಳು ಅಚ್ಚರಿಯಿಂದ ಓದುವಂತೆ ಮಾಡುತ್ತದೆ ಎಂದು ತಿಳಿಸಿದರು.
ಪತ್ರಕರ್ತ ಚ.ಹ.ರಘುನಾಥ ಮಾತನಾಡಿ, ಮುನಿಸ್ವಾಮಿ ಅವರು ಬಡತನದಿಂದ ಬಂದ ವಿದ್ಯಾರ್ಥಿ ಹಾಗಾಗಿ ಅವರು ಹಲವು ಹಂತದಲ್ಲಿ ಅವಮಾನಗಳನ್ನು ಎದುರಿಸಿ ಅವುಗಳನ್ನೇ ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಜೀವನ ಪಯಣದಲ್ಲಿ ಸಾಗಿ ಬಂದವರಾಗಿದ್ದಾರೆ. ಆದ್ದರಿಂದ ಇವರ ಆತ್ಮಕಥನದಲ್ಲಿ ಕಾವ್ಯದ ಒಳ ನೋಟಗಳನ್ನು ಸಹ ಕಾಣಬಹುದಾಗಿದೆ ಎಂದರು.