News

ಸೌಜನ್ಯ ಪ್ರಕರಣ ಸೇರಿದಂತೆ ಧರ್ಮಸ್ಥಳದ ಎಲ್ಲ ಪ್ರಕರಣಗಳಿಗೆ ನ್ಯಾಯ ಒದಗಿಸಲು ಆಗ್ರಹಿಸಿ ಪ್ರತಿಭಟನೆ

Share It

ಬೆಂಗಳೂರು: ಇಡೀ ದೇಶದ ಜನತೆ ಬೆಚ್ಚಿ ಬೀಳುವಂತಹ  ಹಲವು ಕೊಲೆ ಹಾಗೂ ಅತ್ಯಾಚಾರದ ಪ್ರಕರಣಗಳು ಧರ್ಮಸ್ಥಳದಲ್ಲಿ ನಡೆದಿವೆ ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಲೇ ಇದೆ. ಎಲ್ಲ ಅಪರಾಧ ಪ್ರಕರಣಗಳ ಕುರಿತು ಯಾವುದೇ ಒತ್ತಡಗಳಿಗೆ ಮಣಿಯದೇ ನಿಸ್ಪಕ್ಷಪಾತವಾಗಿ ತನಿಖೆ ನಡೆಸಬೇಕು ಮತ್ತು ಸೌಜನ್ಯ ಸೇರಿದಂತೆ ಎಲ್ಲ ಪ್ರಕರಣಗಳಿಗೆ ನ್ಯಾಯ ಒದಗಿಸಲು ಆಗ್ರಹಿಸಿ, ಎಐಡಿಎಸ್‌ಓ ಕರ್ನಾಟಕ ರಾಜ್ಯ ಸಮಿತಿಯಿಂದ ನಗರದ ಫ್ರೀಡಂ ಪಾರ್ಕ್ ನಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಎಐಡಿಎಸ್‌ಓ ರಾಜ್ಯ ಖಜಾಂಚಿ ಸುಭಾಷ್ ಬೆಟ್ಟದಕೊಪ್ಪ ಮಾತನಾಡಿ, ಇಂದು ದೇಶದಲ್ಲಿ ದಿನನಿತ್ಯ ವಿದ್ಯಾರ್ಥಿನಿಯರು, ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರಗಳು ಮತ್ತು ಕೊಲೆ ಪ್ರಕರಣಗಳು ವಿಪರೀತವಾಗುತ್ತಿರುವುದು ವಿಷಾದದ ಸಂಗತಿಯಾಗಿದೆ. ಇಂತಹ ಘಟನೆಗಳು ನಡೆದಾಗಲೆಲ್ಲ ವಿದ್ಯಾರ್ಥಿ ಸಂಘಟನೆ ಇವುಗಳ ವಿರುದ್ಧ ಹೋರಾಟ ನೆಡೆಸುತ್ತಾ ಬಂದಿದೆ. ಇದೀಗ ಇಡೀ ದೇಶದ ಜನತೆ ಬೆಚ್ಚಿ ಬೀಳುವಂತಹ  ಹಲವು ಕೊಲೆ ಹಾಗೂ ಅತ್ಯಾಚಾರದ ಪ್ರಕರಣಗಳು ಧರ್ಮಸ್ಥಳದಲ್ಲಿ ನಡೆದಿವೆ ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಲೇ ಇವೆ.  ಈ ಪ್ರಕರಣಗಳ ಕುರಿತು ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳು ಈ ಕುರಿತು ಮೌನ ತಾಳಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಹಲವು ಪ್ರಕರಣಗಳ ಕುರಿತು ಎದ್ದಿರುವ ಎಲ್ಲ ಪ್ರಶ್ನೆಗಳಿಗೂ ಉತ್ತರ ದೊರೆಯಬೇಕಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಜನತೆಯು ನ್ಯಾಯಕ್ಕಾಗಿ ಎತ್ತಿದ ಕೂಗಿನ ಫಲವಾಗಿ ರಾಜ್ಯ ಸರ್ಕಾರವು ವಿಶೇಷ ತಂಡ ರಚಿಸಿದೆ. ಈ ಎಲ್ಲಾ ಅಪರಾಧ ಪ್ರಕರಣಗಳ ಕುರಿತು ಎಸ್ಐಟಿ ಯಾವುದೇ ಒತ್ತಡಗಳಿಗೆ ಮಣಿಯದೇ ನಿಸ್ಪಕ್ಷಪಾತವಾಗಿ ತನಿಖೆ ನಡೆಸಬೇಕು. ಆರೋಪಿಗಳು ಎಷ್ಟೇ ಪ್ರಭಾವಿಗಳಾಗಿರಲಿ ಅಥವಾ ಯಾರೇ ಆಗಿರಲಿ ನಿಸ್ಪಕ್ಷಪಾತವಾಗಿ ತನಿಖೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು. ರಾಜ್ಯದ ವಿದ್ಯಾರ್ಥಿಗಳು ಮತ್ತು ಜನತೆಯು ಇಂತಹ  ಅತ್ಯಾಚಾರ, ಕೊಲೆ ಅಪರಾಧ ಮತ್ತು ಅನ್ಯಾಯಗಳ ವಿರುದ್ಧ ಬಲವಾದ ಧ್ವನಿ ಎತ್ತಬೇಕು, ಸೌಜನ್ಯ ಸೇರಿದಂತೆ ಎಲ್ಲರಿಗೂ ನ್ಯಾಯ ಸಿಗಲಿ ಎಂದರು.

ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಕಲ್ಯಾಣ ಕುಮಾರ್ ಪ್ರತಿಭಟನೆಯ ಅಧ್ಯಕ್ಷತೆ ವಹಿಸಿದ್ದರು. ರಾಜ್ಯಾಧ್ಯಕ್ಷೆ ಅಶ್ವಿನಿ ಕೆ ಎಸ್, ಕಾರ್ಯದರ್ಶಿ ಅಜಯ್ ಕಾಮತ್ ಸೇರಿದಂತೆ ಇತರ ಮುಖಂಡರು, ರಾಜ್ಯ ಸಮಿತಿಯ ಸದಸ್ಯರು ಮತ್ತು ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.


Share It

You cannot copy content of this page